
ಬೆಂಗಳೂರು: ಅಧಿಕಾರ ಮತ್ತು ತತ್ವ ಸಿದ್ದಾಂತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವೆ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ.
ದಲಿತ ಸಮುದಾಯದಿಂದ ಬಂದು, ರಾಜಕೀಯ ಅಧಿಕಾರಕ್ಕಾಗಿ ಬಾಬಾ ಸಾಹೇಬರ ಸಿದ್ದಾಂತವನ್ನೇ ತೊರೆದು, ಗೋಸುಂಬೆಯ ಥರ ಬಣ್ಣ ಬದಲಾಯಿಸಿದಂತೆ ಅಧಿಕಾರಕ್ಕಾಗಿ ಸಂವಿಧಾನ ವಿರೋಧಿಗಳ ಸಖ್ಯ ಬೆಳಸಿ, ಮನಸ್ಮೃತಿಯ ಪ್ರತಿಪಾದಕರಾಗಿ ಬದಲಾದ ನಿಮ್ಮ ಮನಸ್ಥಿತಿಯ ಬಗ್ಗೆ ಮರುಕವಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದರು.
ಹರಿಪ್ರಸಾದ್ ಹೇಳಿಕೆಗೆ ಇಂದು ಎಕ್ಸ್ ನಲ್ಲಿ ತಿರುಗೇಟು ನೀಡಿರುವ ಛಲವಾದಿ ನಾರಾಯಣಸ್ವಾಮಿ, ಬೇರೆಯವರ "ಖಾಕಿ ಚಡ್ಡಿ" ಯನ್ನು ಬಿಚ್ಚಲು ಪ್ರಯತ್ನಿಸಿ, ನಿಮ್ಮ ಕೈಯಾರೆ ನಿಮ್ಮ ಲಂಗೂಟಿಯನ್ನು ಕಳಚಿಕೊಂಡಿದ್ದು ಇನ್ನೂ ಜನರು ಮರೆತಿಲ್ಲ. ಬೇರೆಯವರ ಚಡ್ಡಿಯ ಮೇಲೆ ನಿಗಾ ವಹಿಸುವುದಕ್ಕಿಂತ ಮುಂಚೆ, ನಿಮ್ಮ ಪಂಚೆ ಮತ್ತು ಚಡ್ಡಿ ಉದುರಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಅಧಿಕಾರಗಳನ್ನು ಯೋಗದಿಂದ ಅನುಭವಿಸಿದ್ದರೂ ಪ್ರಸ್ತುತ ಅತೃಪ್ತ ನಾಯಕರಾಗಿರುವ ಹರಿಪ್ರಸಾದ್, ನನ್ನ ಮೇಲೆ ಮಾಡಿರುವ ಎಲ್ಲಾ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಅವನ್ನು ದೃಢೀಕರಿಸಲು ನಿಮ್ಮಿಂದ ಸಾಧ್ಯವೇಯಿಲ್ಲ, ಇಂತಹ ದುರುದ್ದೇಶಿತ ಆರೋಪಗಳು ನನ್ನ ಹೋರಾಟ ಜೀವನವನ್ನು ಹತ್ತಿಕ್ಕಲಾರವು. ನನ್ನ ಯೋಗ್ಯತೆಯ ಮುಂದೆ ನಿಮ್ಮ ಯೋಗ ಚೆನ್ನಾಗಿ ಕೆಲಸ ಮಾಡಿದೆ, ಆದರೆ ಯೋಗ ಕ್ಷಣಿಕ, ಯೋಗ್ಯತೆ ಅಜರಾಮರ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯೋಗದ ಬಲದಿಂದ ಅಧಿಕಾರಕ್ಕೆ ಬಂದಿದ್ದೀರಿ ಪರರ ಕಾಲು ಬುಡಕ್ಕೆ ಬಿದ್ದರೆ ಯೋಗ ಬರುವುದು ಸಹಜ ಎಂದು ಹಿರಿಯರು ಹೇಳುತ್ತಾರೆ, ಮತ್ತು ಅದನ್ನೇ ಅನುಭವಿಸಿದ್ದೀರಿ. ಆದರೆ ಪ್ರಸ್ತುತ ಅದೇ ಯೋಗದ ಸಹಕಾರದಿಂದ ಮತ್ತೊಮ್ಮೆ ಅಧಿಕಾರದ ಆಸೆಗಾಗಿ ರಾಜಕೀಯ ರಂಗದಲ್ಲಿ ಹಾಹಾಕಾರ ಮಾಡುತ್ತಿದ್ದೀರಿ. ನನ್ನನ್ನು ಬಿಜೆಪಿ ಪಕ್ಷ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿರುವುದು, ನನ್ನ ಯೋಗ್ಯತೆಯನ್ನು ಗುರುತಿಸಿದ ಫಲವೇ ಹೊರತು ನಿಮ್ಮಂತ ಯೋಗದ ಪ್ರಭಾವದಿಂದ ಲಭಿಸಿದ ಅಧಿಕಾರವಲ್ಲ. ಯೋಗ ಮತ್ತು ಯೋಗ್ಯತೆ ನಡುವಿನ ವ್ಯತ್ಯಾಸವನ್ನು ಅರಿಯಬೇಕಾದರೆ ನಿಮ್ಮ ಮತ್ತು ನನ್ನ ರಾಜಕೀಯ ಜೀವನವೇ ಉತ್ತಮ ಉದಾಹರಣೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಮಾಡುವುದು ಗೊತ್ತು! ಇಳಿಸುವುದು ಗೊತ್ತು! ಎನ್ನುವ ರೀತಿಯಲ್ಲಿ ನಿಮ್ಮ ರಾಜಕೀಯ ವ್ಯಥೆ ಮತ್ತು ಅಸಹಾಯಕತೆಯನ್ನು ಮುಚ್ಚಿಡಲು ಇತರರ ಮೇಲೆ ಚಾದರ ಹಾಸಿಸಲು ಯತ್ನಿಸುವುದು ವಿಫಲ ಪ್ರಯತ್ನವಾಗುತ್ತದೆ ಎಂಬುದನ್ನು ಯಾವತ್ತೂ ಮರೆಯಬೇಡಿ. ರಾಜ್ಯ ರಾಜಕಾರಣದಲ್ಲಿ ನಿಮ್ಮ ಪ್ರಾಮುಖ್ಯತೆ ಕ್ಷೀಣಗೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೂ ನಿಮ್ಮನ್ನು ಮೂಲೆಗೊತ್ತಲಾಗಿದೆ. ನಿಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ಕೂಡಾ ಮುಂಚೂಣಿಯ ನಾಯಕರಾಗಿ ಹೊರಹೊಮ್ಮಲಿಲ್ಲ. ಕಳೆದ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರೂ, ಸರ್ಕಾರದಲ್ಲಿ ಕನಿಷ್ಠ ಮಂತ್ರಿ ಸ್ಥಾನಕ್ಕೆ ಪರಿಗಣಿಸಲೂ ಇಲ್ಲದಿರುವುದು, ನಿಮ್ಮ ರಾಜಕೀಯ ಯೋಗದ ನಾಯಕತ್ವಕ್ಕೆ ಪರಮ ಉದಾಹರಣೆ ಎಂದು ಲೇವಡಿ ಮಾಡಿದ್ದಾರ.
ಅಧಿಕಾರದ ಲಾಲಸೆಗೆ ನಮ್ಮ ಪಕ್ಷದ ನಾಯಕರನ್ನು ನಾನು ಎಂದೂ ಹೀಯಾಳಿಸಿಲ್ಲ ಅಥವಾ ನಿಂದಿಸಿಲ್ಲ. ಯಾವತ್ತೂ ಅಧಿಕಾರ ಕ್ಷಣಿಕ, ಆದರೆ ಕಾಯಕ ಶಾಶ್ವತ ಎಂಬ ನಂಬಿಕೆ ನನ್ನಲ್ಲಿದೆ. ನೀವು ಇದನ್ನರಿತರೆ ಸಾಕು! ಬಡಜನರ ಮತ್ತು ತಳಸಮುದಾಯಗಳ ಪರವಾದ ಹೋರಾಟವೇ ನನ್ನ ಜೀವನ! ಹೋರಾಟಕ್ಕೆ ಸಿಕ್ಕ ಪ್ರತಿಫಲವೇ ನನ್ನ ಸ್ಥಾನಮಾನಗಳು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
Advertisement