
ಮೈಸೂರು: ಮುಸ್ಲಿಂ ಸಮುದಾಯದ 70 ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಮ್ಮೆಯಿಂದ ಹೇಳಿದ್ದಾರೆ. ಮುಸ್ಲಿಮರಿಗೆ ಮೋದಿ ಮೀಸಲಾತಿ ನೀಡಿದರೆ ಸರಿ ನಾವು, ಮಾಡಿದರೆ ತಪ್ಪಾಗುತ್ತದೆಯೇ? ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4 ಮೀಸಲಾತಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ನಾವು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿಲ್ಲ. ಹಿಂದುಳಿದ ವರ್ಗ ಎನ್ನುವ ಕಾರಣಕ್ಕೆ ಕೊಟ್ಟಿದ್ದೇವೆ. ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೊಟ್ಟಾಗ ಮುಸ್ಲಿಂ ಧರ್ಮದವರಿಗೂ ಕೊಡಬೇಕಾಗುತ್ತದೆ. ಮುಸ್ಲಿಂ ಮೀಸಲಾತಿ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯದಲ್ಲೂ ಇದೆ. ಆದರೆ, ನಾವು ಕೇವಲ ಮುಸ್ಲಿಂರಿಗೆ ಮಾತ್ರ ಮೀಸಲಾತಿ ಕೊಟ್ಟಿಲ್ಲ ಎಂದು ಹೇಳಿದರು.
1977 ರಲ್ಲೇ ಹಾವನೂರು ಆಯೋಗ ಮುಸ್ಲಿಮರನ್ನ ಹಿಂದುಳಿದ ವರ್ಗಕ್ಕೆ ಸೇರಿಸಿದೆ. ಹಿಂದುಳಿದ ವರ್ಗಕ್ಕೆ ಕೊಟ್ಟಾಗ ಮುಸ್ಲಿಮರಿಗೂ ಕೊಡಬೇಕಾಗುತ್ತದೆ. ಮುಸ್ಲಿಂ ಸಮುದಾಯದ 70 ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಮೋದಿಯವರು ಹೆಮ್ಮೆಯಿಂದ ಹೇಳಿದ್ದಾರೆ. ಮೋದಿಯವರು ಮಾಡಿದರೆ ಸರಿ ನಾವು ಮಾಡಿದ್ರೆ ತಪ್ಪಾಗುತ್ತದೆಯೇ? ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಇದೇ ವೇಳೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ತಂದೆಯವರು ಎಲ್ಲಿಯವರೆಗೂ ಸಿಎಂ ಆಗಿರುತ್ತಾರೆ ಅಲ್ಲಿವರೆಗೆ ಸಚಿವ ಸ್ಥಾನ ಕೇಳಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಳಿಕ ಹನಿಟ್ರ್ಯಾಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲೇ ಹನಿಟ್ರ‍್ಯಾಪ್ ಗಳು ನಡೆದಿವೆ. ಹೀಗಾಗಿಯೇ ಬಿಜೆಪಿ ಶಾಸಕರು, ಮಾಜಿ ಸಿಎಂ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಿರುವಾಗ ಬಿಜೆಪಿಯವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನೆ ಮಾಡಿದರು.
ಸಚಿವರ ಮನೆಗೆ ಸಿಸಿಟಿವಿ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವರು ಹನಿಟ್ರ‍್ಯಾಪ್ ಮಾಡಲೆಂದೇ ಸಚಿವರ ಮನೆಗೆ ಬರುತ್ತಾರೆ. ಈಗಾಗಿ ಸಿಸಿಟಿವಿ ಹಾಕಿಸಬೇಕು. ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ. ಆದರೆ, ಸಿಎಂ ಮನೆಗೆ ಸಿಸಿಟಿವಿ ಇದೆ. ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯವರ ಮನೆಯ ವಿಚಾರ ನನಗೆ ಗೊತ್ತಿಲ್ಲ ಎಂದರು.
ಸಿಎಂ ಮನೆಗೆ ಪೊಲೀಸ್ ಬಂದೂಬಸ್ತ್ ಸಹ ಇದೆ, ಯಾರೇ ಬಂದರೂ ರೆಕಾರ್ಡ್ ಆಗುತ್ತೆ. ಸಚಿವರ ಮನೆಗೆ ಖಂಡಿತವಾಗಿ ಸಿಸಿಟಿವಿ ಹಾಕಬೇಕು. ಸಿಸಿಟಿವಿ ಇದ್ದರೇ ಹನಿ ಟ್ರ‍್ಯಾಪ್ ಮಾಡುವವರ ಮೇಲೆ ಕಣ್ಣಿಡಬಹುದು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರಿಗೆ ಏನು ವಿಷಯ ಇಲ್ಲ. ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಇಂಗ್ಲಿಷ್ ಅವರ ಮಾತೃ ಭಾಷೆ ಅಲ್ಲ. ಆದ್ದರಿಂದ ಅವರು ಹೇಳಬೇಕಾದ ವಿಚಾರ ಸರಿಯಾಗಿ ಹೇಳಲು ಆಗಿಲ್ಲ ಅಷ್ಟೆ. ಸಂವಿಧಾನ ರಕ್ಷಣೆ ಮಾಡಲು ಕಾಂಗ್ರೆಸ್ ಹೋರಾಟ ಮಾಡಿಕೊಂಡು ಬಂದಿದೆ. ನಾವು ಸಂವಿಧಾನ ಬದಲಾಯಿಸುವ ಪ್ರಯತ್ನ ಮಾಡಲ್ಲ. ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿ ಅವರು ಹೇಳಿಕೆ ಕೊಟ್ಟ ಮೇಲೆ ಸ್ಪಷ್ಟನೆ ಕೊಟ್ಟಿಲ್ಲ. ಅನಂತ್ ಕುಮಾರ್ ಹೆಗಡೆ ಹೇಳಿಕೆ ಕೊಟ್ಟ ನಂತರ ಸ್ಪಷ್ಟನೆ ಕೊಡುವ ಕೆಲಸ ಮಾಡಿಲ್ಲ. ಆದರೆ ಡಿಕೆಶಿ ಸ್ಪಷ್ಟನೆಕೊಟ್ಟಿದ್ದಾರೆ. ಆದ್ರೆ ಬಿಜೆಪಿಯವರಿಗೆ ಕೆಲಸ ಇಲ್ಲದೆ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement