
ಬೆಂಗಳೂರು: ಸಂವಿಧಾನ ಬದಲಾವಣೆ ಕುರಿತು ನಾನು ಹೇಳಿಕೆ ನೀಡಿದ್ದೇನೆಂಬುದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸವಾಲು ಹಾಕಿದ್ದಾರೆ.
ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಕುರಿತು ನಾನು ಹೇಳಿಕೆ ನೀಡಿದ್ದೇನೆಂಬುದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ನನ್ನ ವಿರುದ್ಧ ಆರೋಪಿಸುವ ಬಿಜೆಪಿ ನಾಯಕರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ಎಂದು ಸವಾಲು ಹಾಕಿದರು.
ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಲು ನನಗೆ ತಲೆ ಕೆಟ್ಟಿಲ್ಲ. ನಾನು ನೀಡಿದ ಸಂದರ್ಶನದಲ್ಲಿ ಸತ್ಯ ಮಾತನ್ನಾಡಿದ್ದೇನೆ ಹಾಗೂ ನನ್ನ ರಾಜಕೀಯ ನಿಲುವು ತಿಳಿಸಿದ್ದೇನೆ. ನಾನು ಈ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ಸದಸ್ಯ. ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಕನಸಲ್ಲೂ ಚಿಂತಿಸುವುದು ನಮ್ಮ ಜಾಯಮಾನವಲ್ಲ. ಆದರೆ, ಬಿಜೆಪಿಯವರು ಸುಖಾಸುಮ್ಮನೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿದರು.
ನಾನು ಸ್ಪಷ್ಟವಾಗಿ ನನ್ನ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಸಂವಿಧಾನವನ್ನು ಜಾರಿಗೆ ತಂದವರು ನಾವೇ ಆಗಿದ್ದರಿಂದ ಅದನ್ನು ರಕ್ಷಣೆ ಮಾಡುವ ಹೊಣೆಯೂ ನಮ್ಮ ಮೇಲೆಯೇ ಇದೆ. ಈ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ಮತ್ತು ನಾನು ನಿಭಾಯಿಸುತ್ತೇವೆ.
ಒಂದು ವೇಳೆ ನಾನು ಸಂವಿಧಾನ ಬದಲಿಸುತ್ತೇನೆ ಎಂದು ಹೇಳಿದ್ದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಬಿಜೆಪಿ ನಾಯಕರು ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ? ನನ್ನ ವಿರುದ್ದ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆಂದಿದ್ದಾರೆ. ನಾನೂ ಕಾಯುತ್ತಿದ್ದೇನೆ ಎಂದು ತಿಳಿಸಿದರು.
ಹೈಕಮಾಂಡ್ ನಿಮ್ಮಿಂದ ಮಾಹಿತಿ ಪಡೆಯಿತೇ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಗರು ಆರೋಪಿಸುತ್ತಿದ್ದಂತೆ ದೆಹಲಿ ನಾಯಕರು ಗಾಬರಿಯಿಂದ ಕರೆ ಮಾಡಿದ್ದರು. ಆದರೆ, ಅವರಿಗೆ ವಿಷಯ ತಿಳಿಸಿದ್ದೇನೆ. ನಾನು ಮಾತನಾಡಿದ ದೃಶ್ಯದ ತುಣುಕನ್ನು ಕಳುಹಿಸಿ ನಾನು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅವರೂ ಅದನ್ನು ಒಪ್ಪಿದ್ದಾರೆ ಎಂದರು.
Advertisement