
ಬೆಂಗಳೂರು: ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ ವರಿಷ್ಠ ನಾಯಕರೇ ಮುಸ್ಲಿಂರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ.? ಎಂದು ಬಿಜೆಪಿಗೆ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್‌ನವರು ಮಾಡಿದ್ದರೆ ಪರಿಸ್ಥಿತಿ ಹೇಗಿರುತಿತ್ತು.? ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನವರು ಈದ್ ಕಿಟ್ ಕೊಟ್ಟರೆ ಬಿಜೆಪಿಯ ಪುಡಿ ನಾಯಕರು ಇಷ್ಟೊತ್ತಿಗಾಗಲೇ ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬೊಂಬಡ ಬಜಾಯಿಸುತ್ತಿದ್ದರು. ಆದರೆ ಈಗ ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ ವರಿಷ್ಠ ನಾಯಕರೆ ಮುಸ್ಲಿಂರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ.? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ 'ಸೌಗತ್-ಎ-ಮೋದಿ' ಅಭಿಯಾನ ನಡೆಸುತ್ತಿದ್ದು, ಅಭಿಯಾನದ ಅಡಿ ಈದ್ ಕಿಟ್ ವಿತರಿಸುವ ಕಾರ್ಯ ಕೈಗೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಅವರ ನೇತೃತ್ವದಲ್ಲಿ ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
Advertisement