ಯತ್ನಾಳ್ ಉಚ್ಛಾಟನೆ: ಅಶಿಸ್ತಿನ ವಿರುದ್ಧ BJP ವರಿಷ್ಠರು ಕೈಗೊಂಡ ನಿರ್ಧಾರವನ್ನು ಸಂಭ್ರಮಿಸದಿರಿ; ಕಾರ್ಯಕರ್ತರಿಗೆ ವಿಜಯೇಂದ್ರ ಮನವಿ

ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ.
ಬಿ ವೈ ವಿಜಯೇಂದ್ರ
ಬಿ ವೈ ವಿಜಯೇಂದ್ರ
Updated on

ಬೆಂಗಳೂರು: ಅಶಿಸ್ತಿನ ವಿರುದ್ಧ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರವನ್ನು ಸಂಭ್ರಮಿಸಬಾರದು ಎಂದು ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಭಾರತೀಯ ಜನತಾ ಪಾರ್ಟಿ ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಅಶಿಸ್ತಿನ ವಿರುದ್ಧ ಇಂದು ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರವನ್ನು ಸಂಭ್ರಮಿಸಬಾರದೆಂದು ವಿನಂತಿಸುತ್ತೇನೆಂದು ಹೇಳಿದ್ದಾರೆ.

ಸಂಸ್ಕಾರವಂತ ಹಾಗೂ ಶಿಸ್ತುಬದ್ಧ ಸಂಘಟನೆಯ ವ್ಯವಸ್ಥೆಯಲ್ಲಿರುವ ನಾವು ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರವನ್ನು ಗೌರವಿಸಿ, ಮುಂಬರುವ ದಿನಗಳಲ್ಲಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೈಗೊಳ್ಳಬೇಕಿರುವ ಹೋರಾಟಗಳತ್ತ ಒಗ್ಗಟ್ಟಿನ ಸಂಕಲ್ಪ ತೊಟ್ಟು ಮುನ್ನಡೆಯೋಣ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಯತ್ನಾಳ್ ಉಚ್ಛಾಟಣೆ ಕುರಿತು ಮಾತನಾಡಿದ್ದ ವಿಜಯೇಂದ್ರ ಅವರು, ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ.ಟ

ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿಲ್ಲ, ಸದ್ಯ ಯತ್ನಾಳ್ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆಂದು ಹೇಳಿದ್ದರು.

ಬಿ ವೈ ವಿಜಯೇಂದ್ರ
ಯತ್ನಾಳ್ ವಿರುದ್ಧ ಶಿಸ್ತು ಕ್ರಮ: ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರು ನೀಡಿಲ್ಲ- ಬಿ.ವೈ ವಿಜಯೇಂದ್ರ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com