
ಮಂಗಳೂರು: ಕರ್ನಲ್ ಸೋಫಿಯಾ ಖುರೇಷಿ ಅವರನ್ನು "ಭಯೋತ್ಪಾದಕರ ಸಹೋದರಿ" ಎಂದು ಕರೆದಿರುವ ಮಧ್ಯಪ್ರದೇಶ ಸಚಿವೆ ಕುನ್ವರ್ ವಿಜಯ್ ಶಾ ಅವರ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತೀವ್ರವಾಗಿ ಕಿಡಿಕಾರಿದ್ದು, ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ಬಾರಿ ಶಾಸಕರಾಗಿರುವ ಶಾ ಅವರ ಪ್ರಚೋದನಕಾರಿ ಹೇಳಿಕೆ ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕೂಡಲೇ ವಿಜಯ್ ಶಾ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಸೋಫಿಯಾ ಅವರನ್ನು ಕರ್ನಾಟಕದ ಹೆಮ್ಮೆಯ ಸೊಸೆ ಎಂದು ಕರೆದ ಅವರು, ದೇಶಕ್ಕೆ ಸೇವೆ ಸಲ್ಲಿಸುವ ಜನರ ವಿರುದ್ಧ ಇಂತಹ ಮನಸ್ಥಿತಿಯನ್ನು ಸಹಿಸಬಾರದು ಎಂದು ಹೇಳಿದರು. ಇದಲ್ಲದೆ,'ಆಪರೇಷನ್ ಸಿಂಧೂರ್' ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಭಂಡಾರಿ ಒತ್ತಾಯಿಸಿದರು.
ಪಾಕಿಸ್ತಾನ ಯುದ್ಧವನ್ನು ಗೆದ್ದಿದೆ ಎಂದು ಹೇಳಿಕೊಂಡರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ನಿಲ್ಲಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಬೇಕಾಗಿತ್ತು, ಆದರೆ, ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯಗಳನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ಕುರಿತು ಮಾತನಾಡಿ, ಟ್ರಂಪ್ ಹೇಳಿಕೆಯ ಬಗ್ಗೆ ಕೇಂದ್ರ ಸರ್ಕಾರವೇರಕೆ ಮೌನ ತಾಳಿದೆ ಎಂದು ಪ್ರಶ್ನಿಸಿದರು.
ಭಾರತ -ಪಾಕಿಸ್ತಾನ ನಡುವೆ ಯುದ್ಧ ನಡೆದು ಪಾಕಿಸ್ತಾನ ನಾಲ್ಕು ಭಾಗವಾಗಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಯುದ್ಧದ ಬಗ್ಗೆ ಸೈನಿಕರಿಗಿಂತ ಮೊದಲು ಸೂಲಿಬೆಲೆ ಅವರಿಗೆ ಗೊತ್ತಾಗಿದ್ದು ಹೇಗೆ? ಅವರಿಗೆ ಯಾರು ಮಾಹಿತಿ ನೀಡಿದ್ದಾರೆ? ಪ್ರಚೋದನಾಕಾರಿಯಾಗಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ನೀಡಲಾಗುವುದು ಎಂದರು.
Advertisement