
ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, 'ಶೂನ್ಯ' ಸಾಧನೆಗಳನ್ನು ಎತ್ತಿ ತೋರಿಸಲು 'ಸಾಧನಾ ಸಮಾವೇಶ' ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೋಮವಾರ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಸಾಧನೆಗಳು ಮಾಧ್ಯಮ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿವೆ. ಚುನಾವಣೆಗೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೆ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಈ ಸರ್ಕಾರದ ಪರ ಜನರ ಅಭಿಪ್ರಾಯವಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ನಡೆಸಬೇಕು. ಆದರೆ, ಸರ್ಕಾರ ಅಭಿವೃದ್ಧಿಗಳಿಗೆ ಹಣ ನೀಡದ ಕಾರಮ ಶಾಸಕರು ಈಗ ತಮ್ಮ ಕ್ಷೇತ್ರಗಳ ಜನರನ್ನು ಭೇಟಿಯಾಗುವುದನ್ನು ತಪ್ಪಿಸುವ ಪರಿಸ್ಥಿತಿಯಲ್ಲಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಪ್ರಾರಂಭಿಸಿದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ದೂರದೃಷ್ಟಿಯ ಕೊರತೆಯಿದೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನೂ ಕೂಡ ಮುಚ್ಚುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ.
‘ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಂಗು– ರಂಗಿನ ಜಾಹೀರಾತು ನೀಡುತ್ತಿದ್ದಾರೆ. ಇದು ಜಾಹೀರಾತಿನ ಸರ್ಕಾರವೇ ಹೊರತು, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸರ್ಕಾರವಲ್ಲ. ರಾಜ್ಯದ ಜನರು ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಜನರ ಅಸಮಾಧಾನದ ಮಧ್ಯೆಯೇ ಶೂನ್ಯ ಸಾಧನೆಯ ಸಮಾವೇಶ ಮಾಡಲು ಮುಂದಾಗಿದ್ದಾರೆಂದು ತಿಳಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, ಮಂತ್ರಿ ಮಂಡಲದ ಸಚಿವರ ಮೊಗದಲ್ಲಿ ಕಿಂಚಿತ್ತೂ ಕಳೆಯಿಲ್ಲ. ಪಟ್ಟ ಬಿಟ್ಟುಕೊಡಬೇಕಾದ ದಿನ ಹತ್ತಿರ ಬಂತಲ್ಲ ಎಂಬ ನೋವು ಸಂಭ್ರಮಕ್ಕಿಂತ ಹೆಚ್ಚಾಗಿ ಸಚಿವರನ್ನು ಕಾಡುತ್ತಿದೆ. ಸಾಧನಾ ಸಮಾವೇಶದ ಬೆನ್ನಲ್ಲೇ ಸರಕಾರದ ಕರಿಮಣಿ ಮಾಲಕತ್ವಕ್ಕಾಗಿ ಭೀಕರ ಕದನ ನಡೆಯಲಿದೆ ಎಂಬ ಚರ್ಚೆ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ದಟ್ಟವಾಗಿದ್ದು, ಕೊರಳಿಗೆ ಬೆರಳು ಬೀಳುವ ದಿನ ಹತ್ತಿರವಾಗುತ್ತಿದೆ. ಆದಾಗಿಯೂ ಎರಡು ವರ್ಷಗಳಲ್ಲಿ ನಯಾಪೈಸೆಯಷ್ಟೂ ಜನಪರ ಕೆಲಸ ಮಾಡದ ಈ ದಂಡಪಿಂಡ ಸರಕಾರ ಸಾಧನಾ ಸಮಾವೇಶ ನಡೆಸುತ್ತಿರುವುದು ಜನಾದೇಶದ ಕ್ರೂರ ವ್ಯಂಗ್ಯವಾಗಿದೆ ಎಂದು ಟೀಕಿಸಿದ್ದಾರೆ.
ಅಷ್ಟಕ್ಕೂ ಸಿದ್ದರಾಮಯ್ಯನವರೇ ನೀವು ಈ ರೀತಿ ಸಂಭ್ರಮಿಸುವುದಾದರೂ ಏಕೆ?, ಅಭಿವೃದ್ಧಿ ನಿಧಿಯನ್ನು ಸಕಾಲಕ್ಕೆ ಬಿಡುಗಡೆ ಮಾಡದೇ ರಾಜ್ಯದ ಬೆಳವಣಿಗೆಯ ದರವನ್ನು ಹತ್ತು ವರ್ಷ ಹಿಂದೆ ತಳ್ಳಿದಕ್ಕಾಗಿಯೇ? ಮರಣ ಪ್ರಮಾಣ ಪತ್ರದಿಂದ ಮೊದಲುಗೊಂಡು ಎಲ್ಲ ಸರ್ಕಾರಿ ಸೇವೆಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿದಕ್ಕಾಗಿಯೇ?, ಕೇಂದ್ರ ಸರ್ಕಾರದ ಜತೆ ಕಾಲು ಕೆದರಿ ಜಗಳಕ್ಕೆ ನಿಂತು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಳ್ಳಹಿಡಿಸಿದಕ್ಕಾಗಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಭ್ರಷ್ಟಾಚಾರವನ್ನು ಶೇ100ಕ್ಕೆ ಹೆಚ್ಚಿಸಿದಕ್ಕಾಗಿಯೇ?. ಎಸ್ಸಿಎಸ್ಪಿ, ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದಕ್ಕಾಗಿಯೇ?. ಸಂವಿಧಾನ ಬಾಹಿರವಾಗಿ ಮುಸ್ಲಿಂರಿಗೆ ಸರ್ಕಾರಿ ಗುತ್ತಿಗೆ ಹಾಗೂ ಪೂರೈಕೆಯಲ್ಲಿ ಮೀಸಲು ಕಲ್ಪಿಸಿದಕ್ಕಾಗಿಯೇ?. ಮುಡಾ ಪ್ರಕರಣದ ಬಳಿಕ ಬೆಂಗಳೂರು ಬಿಟ್ಟು ರಾಜ್ಯ ಪ್ರವಾಸ ಮಾಡುವುದಕ್ಕೆ ಅಂಜುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ಈಗ "ಬೆಂಗಳೂರು-ಮೈಸೂರಿಗೆ" ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಮಾವೇಶ ನಡೆಸಿ ಏನನ್ನು ಸಾಧಿಸುತ್ತೀರಿ?
ಇದಲ್ಲದೇ ಶಾಸಕರು, "ಬೆಂಗಳೂರಿನ ಜನರು ಕಷ್ಟದಲ್ಲಿರುವಾಗ ಸಾಧನಾ ಸಮಾವೇಶದ ಈ ಸಂಭ್ರಮ ಬೇಕೇ?. ಈ ದುರಾಡಳಿತವನ್ನು ನಿಮ್ಮ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುತ್ತಾರೆಯೇ?. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ ವಿನಿಯೋಗಿಸಿದ ಹಣ ಎಷ್ಟು ಎಂದು ಮೊದಲು ಶ್ವೇತಪತ್ರ ಪ್ರಕಟಿಸಿ ಎಂದು ಆಗ್ರಹಿಸಿದ್ದಾರೆ.
Advertisement