
ವಿಜಯಪುರ: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೂಲತಃ ಮಹಾರಾಷ್ಟ್ರದವರಾಗಿದ್ದು ಇವರ ತಂದೆ ರಾಮನಗೌಡರು ಬೀಡಿ ಮಾರುತ್ತಿದ್ದರು. ಇವರ ಮನೆತನದ ಹೆಸರು ಧರ್ಮಕಡ್ಲಿ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಯತ್ನಾಳ್’ಗೆ ರಾಜಕೀಯ ಜೀವನ ಕೊಟ್ಟಿದ್ದೇ ನಮ್ಮ ಮನೆತನ. ನಮ್ಮ ತಂದೆಯ ಕಾಲಿನ ಮಣ್ಣು ಸಹ ನೀವಾಗಲ್ಲ. ನಮ್ಮ ತಂದೆ ಬಗ್ಗೆ ಇನ್ನೊಂದು ಮಾತನಾಡಿದರೂ ಸುಮ್ಮನಿರಲ್ಲ. ತಾಕತ್ ಇದ್ದರೆ ಎದುರು-ಬದುರು ನಿಂತು ಮಾತನಾಡಲಿ ಎಂದು ಸವಾಲು ಹಾಕಿದರು.
ಯತ್ನಾಳರ ಅಜ್ಜನ ಹೆಸರು ಬಸನಗೌಡ. ಮೂಲತಃ ಮಹಾರಾಷ್ಟ್ರದ ಜತ್ತ ತಾಲೂಕಿನ ಕಾಗನೇರಿಯವರಾದ ಇವರ ಪುತ್ರ ರಾಮನಗೌಡ ಪಾನ್‌ಶಾಪ್ ಇರಿಸಿಕೊಂಡಿದ್ದರು. ಇವರ ಮನೆತನದ ಹೆಸರು ಧರ್ಮಕಡ್ಲಿ. ತಂದೆ ತೀರಿಕೊಂಡಾಗ ಹೊಡೆದಾಡಿ ಅವಮಾನಿಸಿ ಇವರು ಯಾವ ಸೀಮೆ ಪಾಟೀಲ? ಎಲ್ಲಿದೆ ಇವರ ಗೌಡಕಿ? ಗೌಡಕಿ ಪದದ ಅರ್ಥವಾದರೂ ಗೊತ್ತೆ? ಬನ್ನಿ ಗೌಡಕಿ ಎಂದರೆ ಹೇಗಿರುತ್ತದೆ ಎಂದು ನಾವು ತೋರಿಸುತ್ತೇವೆ.
ನಮ್ಮ ತಂದೆ ನಗರಸಭೆ ಅಧ್ಯಕ್ಷರಾಗಿ ಮಾಡಿದ ಕಾರ್ಯ ಇನ್ನೂ ಚಿರಸ್ಥಾಯಿಯಾಗಿದೆ. ನಾವೆಲ್ಲ ನಮ್ಮ ಅಪ್ಪಗೆ ಹುಟ್ಟಿದ್ದೇವೆ. ಅಂತೆಯೇ ನನ್ನಣ್ಣ ರಾಜೀನಾಮೆ ನೀಡಿ ಏನೆಂದು ಸಾಬೀತು ಪಡಿಸಿದ್ದಾನೆ. ಪಕ್ಷ ಬೇರೆಯಾದರೂ ಮನೆತನದ ವಿಚಾರಕ್ಕಾಗಿ ನಾನು ಈ ಮಾತು ಹೇಳಲೇಬೇಕಿದೆ. ನಮ್ಮ ಮನೆತನದ ಹೆಸರು ಹಚಡದ ಎಂದು ಹೇಳುವ ಯತ್ನಾಳ್ ತನ್ನ ಇತಿಹಾಸ ಅರಿಯಲಿ. ಅವರ ತಂದೆ ಬಗ್ಗೆ ನಾನು ಮಾತನಾಡಲ್ಲ. ಅವರ ಬಗ್ಗೆ ನಮಗೆ ಗೌರವವಿದೆ. ಈ ಯತ್ನಾಳರಂತೆ ರಾಮನಗೌಡರ ಹೆಸರಲ್ಲಿ ಡಬ್ಬಿ ಇಟ್ಟು ನಾವು ರೊಕ್ಕ ಎತ್ತಲ್ಲ, ದನದ ಹೆಸರಲ್ಲಿ ರೊಕ್ಕ ಎತ್ತಲ್ಲ, ಇಡೀ ರಾಜ್ಯದಲ್ಲಿಯೇ ನಮ್ಮ ಮನೆತನಕ್ಕೆ ಹೆಸರಿದೆ ಎಂದು ವಾಗ್ದಾಳಿ ನಡೆಸಿದರು.
ಯತ್ನಾಳ್ ಅವರಿಗೆ ರಾಜಕೀಯ ಜೀವನ ಕೊಟ್ಟಿದ್ದೇ ನಮ್ಮ ಮನೆತನ. ನಮ್ಮ ತಂದೆಯ ಕಾಲಿನ ಮಣ್ಣು ಸಹ ನೀವಾಗಲ್ಲ. 1976 ರಲ್ಲಿ ನಮ್ಮ ತಂದೆ ತೀರಿಕೊಂಡಾಗ ಕುಡಿಯಲು ಹನಿ ನೀರು ಸಹ ಸಿಕ್ಕಿರಲಿಲ್ಲ. ಅಷ್ಟು ಜನ ಸೇರಿದ್ದರು. ಇದು ಇತಿಹಾಸ. ಅಂತಹ ನಮ್ಮ ತಂದೆ ಬಗ್ಗೆ ಇನ್ನೊಂದು ಮಾತನಾಡಿದರೂ ಸುಮ್ಮನಿರಲ್ಲ. ತಾಕತ್ ಇದ್ದರೆ ಎದುರು-ಬದುರು ಬಂದು ಮಾತನಾಡು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಯತ್ನಾಳ್ ಹೆಸರು ತೆಗೆಯಬಾರದು. ಭಾರತೀಯ ಜನತಾ ಪಕ್ಷ ಸಂಸ್ಕೃತಿ, ಸಂಸ್ಕಾರ ಉಳ್ಳದ್ದು. ತತ್ವ, ಸಿದ್ದಾಂತ ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಹೊರಹಾಕಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯತ್ನಾಳ್ ಅವರಿಗೆ ಮಾನ ಮರ್ಯಾದೆ ಇದೆಯಾ? ಈತನ ಹೆಸರು ಹೇಳಿದರೆ ಪಾದದಿಂದ ತಲೆಯವರೆಗೂ ಉರಿಯುತ್ತದೆ. ಬಬಲೇಶ್ವರದಲ್ಲಿ ಬಿಜೆಪಿ ಸೋಲಲು ಕಾರಣವೇ ಈ ಯತ್ನಾಳ. ಕಾಂಗ್ರೆಸ್‌ನ ಅಭ್ಯರ್ಥಿ ಎಂ.ಬಿ. ಪಾಟೀಲರ ಜೊತೆ ಹೊಂದಾಣಿಕೆ ಇಟ್ಟುಕೊಂಡ ವ್ಯಕ್ತಿ ಈತ. ಮಹಾನಗರ ಪಾಲಿಕೆಯಲ್ಲಿಯೂ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯದಂತೆ ಮಾಡಿದ್ದರು ಎಂದು ಆರೋಪಿಸಿದರು.
ಎಂದಿಗೂ ಅಕ್ರಮ ಮಾರ್ಗಗಳ ಮೂಲಕ ಹಣ ಸಂಪಾದಿಸಿಲ್ಲ ಎಂಬ ಯತ್ನಾಳ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಎಲ್ಲರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಾರೆ, ಆದರೆ, ವಾಸ್ತವವೆಂದರೆ ಯತ್ನಾಳ ಅವರು ಕಗ್ಗೋಡ್ ಗ್ರಾಮದಲ್ಲಿ ಸ್ಥಾಪಿಸಿರುವ ಗೋಶಾಲೆ (ಗೋಶಾಲೆ) ಸೇರಿದಂತೆ ವಿವಿಧ ಅಕ್ರಮ ಮಾರ್ಗಗಳ ಮೂಲಕ ಹಣ ಸಂಪಾದಿಸಿದ್ದಾರೆ. ಯತ್ನಾಳ್ ಅವರು ಜನರನ್ನು ಗೋಶಾಲೆಗೆ ದಾನ ಮಾಡುವಂತೆ ಕೇಳುತ್ತಾರೆ. ಅಲ್ಲಿಂದ ಹಣವನ್ನು ತಮ್ಮ ವೈಯಕ್ತಿಕ ಬಳಕೆಗಾಗಿ ಬೇರೆಡೆಗೆ ತಿರುಗಿಸುತ್ತಾರೆ.
1994ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಯತ್ನಾಳ ಅದಕ್ಕೂ ಮುನ್ನ ಒಂದು ಹಳೆಯ ಟ್ರಕ್ ಇರಿಸಿಕೊಂಡಿದ್ದರು. ತಿರುಗಾಡಲು ವಾಹನವೇ ಇಲ್ಲದಾಗ ಸರದೇಶಪಾಂಡೆ ಎಂಬ ನೌಕರ ಸಹಾಯ ಮಾಡಿದ್ದನು. ಸ್ಕಾರ್ಪಿಯೋ ಗಾಡಿ ಕೊಡಿಸಿದ್ದರು. ಇರಲು ಜಾಗ ಕೊಟ್ಟಿದ್ದರು. ಮುಂದೆ ಆ ಅಧಿಕಾರಿ ಅಮಾನತ್ತಾದರು. ಭೀಮಾಶಂಕರ ಹದನೂರ ಆದಿಯಾಗಿ ಅನೇಕ ಬೆಂಬಲಿಗರು ಸಹಾಯ ಮಾಡಿದ್ದನ್ನು ಈ ಯತ್ನಾಳ ಮರೆತರು. ಮುಂದೆ ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕರಾದರು. ಆ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿ ಡಿವಿಡೆಂಟ್ ಫಂಡ್ ಒಯ್ದು ಬೇರೆ ಕಡೆ ಹಾಕಿದರು. ಈಗ 1.5 ಕೋಟಿ ರೂಪಾಯಿ ಕಾರಲ್ಲಿ ತಿರುಗಾಡುವ ಯತ್ನಾಳಗೆ ಎಲ್ಲಿಂದ ಹಣ ಬಂತು? ಏನು ಮಾಡಿ ಗಳಿಸಿದ? ಎಂದು ಪ್ರಶ್ನಿಸಿದರು.
Advertisement