
ವಿಜಯಪುರ: ಭಾರತೀಯ ಸೇನಾಪಡೆಯ ಆಪರೇಷನ್ ಸಿಂಧೂರ್ ಬಗ್ಗೆ ಟೀಕಿಸುವವರಗೆ ಗುಂಡು ಹೊಡಿಬೇಕು ಎಂದು ಮಾಜಿ ಉಪಮುಖ್ಯಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ಭಾರತದ ಸೈನಿಕರು ದಾಳಿ ಮಾಡಿರುವುದನ್ನು ಪ್ರಶ್ನಿಸುತ್ತಿರುವ, ಸಾಕ್ಷ್ಯ ಕೇಳುತ್ತಿರುವ ಕಾಂಗ್ರೆಸ್‌ನ ಪ್ರಿಯಾಂಕಾ ಖರ್ಗೆ, ಸಂತೋಷ ಲಾಡ್, ದಿನೇಶ ಗುಂಡೂರಾವ್, ಕೊತ್ತೂರು ಮಂಜುನಾಥ್, ಬಿ.ಕೆ.ಹರಿಪ್ರಸಾದ್ ಅವರಂತವರು ನಿಜವಾದ ರಾಷ್ಟ್ರದ್ರೋಹಿಗಳು. ಇಂತವರಿಗೆ ಮೊದಲು ಗುಂಡಿಟ್ಟು ಹೊಡೆಯಬೇಕು ಎಂದು ಹೇಳಿದರು.
ಇಡೀ ದೇಶ ಒಂದಾಗಿರುವ ಸಂದರ್ಭದಲ್ಲಿ ಪಾಕಿಸ್ತಾನದ ಪರವಾದ ಹೇಳಿಕೆ ನೀಡಿ, ದೇಶದ ಒಳಗೆ ಅರಾಜಕತೆ ಸೃಷ್ಟಿಸುತ್ತಿರುವ ಕಾಂಗ್ರೆಸಿನಲ್ಲಿರುವ ದೇಶದ್ರೋಹಿಗಳಿಗೆ ಗುಂಡಿಡಬೇಕು. ಆಗ ಬಹಳಷ್ಟು ಕಾಂಗ್ರೆಸಿಗರೇ ಮೊದಲು ಸಂತೋಷ ಪಡುತ್ತಾರೆ.
ಕಾಂಗ್ರೆಸ್ ಸದ್ಯ ಎರಡು ದಿಕ್ಕಾಗಿದೆ. ಜೂನಿಯರ್ ಕಾಂಗ್ರೆಸ್ ನಾಯಕರು ಮಾತ್ರ ಟೀಕೆ ಮಾಡುತ್ತಿದ್ದಾರೆ. ಸೀನಿಯರ್ ಖರ್ಗೆ ವಿಧಿ ಇಲ್ಲದೆ ಅಲ್ಲೊಂದು ಇಲ್ಲೊಂದು ಮಾತನಾಡುತ್ತಾರೆ. ಆದರೆ, ಪಾಕಿಸ್ತಾನ ಪರವಾಗಿ ಮರಿ ಖರ್ಗೆ ಇದ್ದಾರೆ. ಹರಿಪ್ರಸಾದ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಅವರಂತಹ ಕೆಲವರಿಗೆ ಮಾತ್ರ ಎಲ್ಲಿ ಇದ್ದೇವೆ. ಏನು ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಹೌದೋ, ಅಲ್ವೋ ಎಂದೇ ಗೊತ್ತಾಗುತ್ತಿಲ್ಲ. ಇವರ ಬಗ್ಗೆ ಕಾಂಗ್ರೆಸ್‌ನವರಿಂದಲೇ ಟೀಕೆ ಕೇಳಿಬರುತ್ತಿದೆ.
ಆಪರೇಷನ್ ಸಿಂಧೂರ್ ಬಗ್ಗೆ ಪ್ರೂಫ್ ಕೇಳೋಕೆ ಪ್ರಿಯಾಂಕ್ ಹಾಗೂ ಲಾಡ್ ಯಾರು? ಇವರಿಗೆ ಆಪರೇಷನ್ ಸಿಂಧೂರದ ಬಗ್ಗೆ ಏನು ಪ್ರೂಫ್ ಕೊಡಬೇಕು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲಾ ಪಕ್ಷದ ಸಭೆಗೆ ಹೋಗಿದ್ದಾರೆ. ಅವರನ್ನೇ ಕೇಳಲಿ ಇವರು. ಅವರು ಸಾಕ್ಷಿ ಕೊಟ್ಟೇ ಕೊಡುತ್ತಾರೆಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್‌ನ ಸಾಧನಾ ಸಮಾವೇಶದ ಕುರಿತು ಪ್ರತಿಕ್ರಿಯಿಸಿ, "ಒಂದು ಗುಂಡಿಯೂ ಮುಚ್ಚಿಲ್ಲ" ಮತ್ತು "ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ" ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ಆಡಳಿತಾತ್ಮಕ ನಿಷ್ಕ್ರಿಯತೆಯ ನಡುವೆಯೂ ಇಂತಹ ಸಮಾವೇಶವನ್ನು ಆಯೋಜಿಸುವುದರ ಹಿಂದಿನ ಉಧ್ದೇಶವೇನು? ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿಯನ್ನು ತಪ್ಪಿಸುತ್ತಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದಾರೆ. ಅವರಿಗೆ ಜಾತಿ ಜನಗಣತಿ ಬೇಡ. ಅಧಿಕಾರದಲ್ಲಿ ಉಳಿಯಲು ಅವರು ಲಿಂಗಾಯತ ಮತಬ್ಯಾಂಕ್ ಅನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.
Advertisement