
ಬೆಂಗಳೂರು: ಮಂಗಳವಾರ ಎರಡು ವರ್ಷಗಳನ್ನು ಪೂರೈಸಿದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಆರೋಪಪಟ್ಟಿ ಬಿಡುಗಡೆ ಮಾಡಿದ್ದು, ದಿವಾಳಿ ಮಾಡೆಲ್ ಆಫ್ ಕರ್ನಾಟಕ ಎಂಬ ಬಿರುದನ್ನು ನೀಡಿದೆ.
ನಗರ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ 8 ಪುಟಗಳ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿತು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್‌ನವರು ನಯಾ ಪೈಸೆ ಸಾಧನೆ ಮಾಡದೆ ಇಲ್ಲಿ ಸಂಭ್ರಮದ ಸಮಾವೇಶ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಸೋಲಿಗೆ ಕಾರಣರಾದ ಸೇನಾ ಮುಖ್ಯಸ್ಥ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಕೊಟ್ಟಿರುವ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಿವಾಳಿ ಮಾಡಲ್ ಆಫ್ ಕರ್ನಾಟಕ ಎಂಬ ಬಿರುದು ಕೊಡುತ್ತೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ಸಾಧನೆಯನ್ನೂ ಮಾಡಿಲ್ಲ. ಎಲ್ಲವನ್ನೂ ಸಾಲ ಮಾಡಿಯೇ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ಗೃಹ ಲಕ್ಷ್ಮಿ ಹಣವನ್ನು ತಿಂಗಳು ತಿಂಗಳು ಕೊಡುತ್ತೇವೆ ಎಂದು ಹೇಳಿಲ್ಲ, ದುಡ್ಡು ಬಂದಾಗ ಕೊಡುತ್ತೇವೆ ಎಂದಿದ್ದಾರೆ. ಜನ ಇವರ ವಂಚನೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯಾವ ಸಾಧನೆಗೆ ಕಾಂಗ್ರೆಸ್‌ನವರು ಹೊಸಪೇಟೆ ಸಮಾವೇಶ ಮಾಡಿದ್ದಾರೆ. ಎಲ್ಲಾ ಪದಾರ್ಥಗಳ ದರ ಏರಿಸಿದ ಮೇಲೂ ಸಮಾವೇಶ ಮಾಡುವ ಸಂಭ್ರಮ ಬೇಕಿತ್ತೇ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆಯಿತು, ನಾಗಮಂಗಲದಲ್ಲಿ ಗಣೇಶನಿಗೆ ಜೈಲುವಾಸ, ವಾಲ್ಮೀಕಿ ನಿಗಮದ ಹಗರಣ, ಪಾಕ್ ಜಿಂದಾಬಾದ್ ಕೂಗಿಸಿದರು, ಪಾಕ್ ಜತೆ ಯುದ್ಧ ಬೇಡ ಎಂದರು. ಇದಕ್ಕಾಗಿ ಸಾಧನೆಯ ಸಮಾವೇಶ ಎಂದು ವ್ಯಂಗ್ಯವಾಡಿದರು.
ಮಳೆಯಿಂದ ಜನ ನರಳುತ್ತಿದ್ದಾರೆ, ಐವರು ತೀರಿಕೊಂಡಿದ್ದಾರೆ. ಇದಕ್ಕಾಗಿ ಸಂಭ್ರಮನಾ, ಬೆಂಗಳೂರು ಮಳೆಯಲ್ಲಿ ತೇಲುತ್ತಿದೆ. ಇಷ್ಟಾದರೂ ಸರ್ಕಾರ ಸಾಧನೆ ಮಾಡುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ, ಟೆಂಡರ್ ಮೂಲಕ ಯೋಜನೆಗಳಿಗೆ 1,600 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು, ಆದರೆ ಅದನ್ನು ರದ್ದುಗೊಳಿಸಲಾಯಿತು. ಕಾಂಗ್ರೆಸ್ ಸರ್ಕಾರ 54,000 ಕೋಟಿ ರೂ.ಗಳನ್ನು ಘೋಷಿಸಿದರೂ, ಹಣವನ್ನು ಬಿಡುಗಡೆ ಮಾಡಲಾಗಿಲ್ಲ. ರಸ್ತೆಗಳಿಗೆ 7,000 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದ್ದರೂ, ಸುರಂಗ ಯೋಜನೆಯ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ. ರಾಜ್ಯ ಸರ್ಕಾರ 1.16 ಲಕ್ಷ ಕೋಟಿ ಸಾಲ ಮಾಡಿದೆ. ಪ್ರತಿ ನಾಗರಿಕನ ಮೇಲೆ 1 ಲಕ್ಷ ಸಾಲ ಇದೆ. 6306 ಕೋಟಿ ರೂ. ವಾರ್ಷಿಕ ಬಡ್ಡಿ ಕಟ್ಟಬೇಕು. ಅವೈಜ್ಞಾನಿಕ ಗ್ಯಾರಂಟಿ ಕಾರಣ ಸಾಲವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಸಾಲ ಮಾಡಿ ರಾಜ್ಯ ಮುನ್ನಡೆಸುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಹಿಂದುಳಿದ ವರ್ಗ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ಮತ್ತು ಮಹಿಳೆಯರ ವಿರುದ್ಧ ಅನ್ಯಾಯ ಮತ್ತು ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ. ಗೃಹ ಸಚಿವರು ಯಾರು ಎಂಬುದೇ ಗೊತ್ತಿಲ್ಲ, ಜಿಲ್ಲೆಗೊಬ್ಬ, ತಾಲ್ಲೂಕಿಗೊಬ್ಬ ಹೋಂ ಮಿನಿಸ್ಟರ್ ಆಗಿದ್ದಾರೆ. ಗೃಹ ಸಚಿವರು ಏನು ಕೇಳಿದರೂ ಗೊತ್ತಿಲ್ಲ ಎಂದು ಉತ್ತರ ಕೊಡುತ್ತಾರೆ ಎಂದು ಟೀಕಿಸಿದರು.
ಹೊಸಪೇಟೆಯ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆಪರೇಷನ್ ಸಿಂಧೂರ್‌ಗೆ ಚುಟ್‌ಪುಟ್ ಯುದ್ಧ ಎಂದಿದ್ದಾರೆ. ಚುಟ್‌ಪುಟ್ ಎಂದರೆ ಏನು, ನಮ್ಮ ದೇಶದ ಇರುವೆ ಪಾಕಿಸ್ತಾನಕ್ಕೆ ಕಚ್ಚಿದೆ ಎಂಬರ್ಥವೇ? ಖರ್ಗೆಯವರು ನಮ್ಮ ಪಾಕಿಸ್ತಾನ ಎಂದಿದ್ದಾರೆ. ಆದರೆ, ಭಾರತ ಯಾರದ್ದು ಎಂದು ಪ್ರಶ್ನಿಸಿದರು.
ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರ್ಕಾರದ ಪಾಡಾಗಿದೆ. ಈ ದಸರಾ ವೇಳೆಗೆ ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ. ದಸರಾದಲ್ಲಿ ಚಾಮುಂಡೇಶ್ವರಿ ದೇವಿಗೆ ಸಿದ್ದರಾಮಯ್ಯನವರೇ ಹೂವಿನ ಅರ್ಚನೆ ಮಾಡುತ್ತಾರಾ ಅಥವಾ ಮನೆಯಲ್ಲಿ ಕುಳಿತು ದಸರಾ ನೋಡುವ ಪರಿಸ್ಥಿತಿ ಬರುತ್ತಾ ಎಂದು ಪ್ರಶ್ನಿಸಿದರು.
Advertisement