ರಾಮನ ಹೆಸರಲ್ಲಿ ರಾಜಕೀಯ ಮಾಡಿದ್ದಾರಷ್ಟೆ; ಕುಮಾರಸ್ವಾಮಿ ಕನ್ನಡಿಗರ ₹5 ಲಕ್ಷ ಕೋಟಿ ಹಣ ತಂದರೆ ಚಿನ್ನದ ತಗಡನ್ನೇ ಹಾಕಿಸೋಣ: ಡಿ.ಕೆ ಸುರೇಶ್

ಕೆಂಗಲ್ ಹನುಮಂತಯ್ಯ ಅವರು ಇಲ್ಲಿಂದ ಮುಖ್ಯಮಂತ್ರಿ ಆಗಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಕೆಂಗಲ್ ಹನುಮಂತಯ್ಯ ಅವರ ಒಂದೇ ಒಂದು ಪ್ರತಿಮೆ ಮಾಡಿದ್ದಾರಾ? ಅಧಿಕಾರದಲ್ಲಿದ್ದಾಗ ಅವರ ಹೆಸರು ಹೇಳಿದ್ದರಾ?
DK suresh
ಡಿ.ಕೆ ಸುರೇಶ್
Updated on

ಬೆಂಗಳೂರು: ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ತಮ್ಮ ಅವಧಿಯಲ್ಲಿ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಮುಂದಿಟ್ಟು ಮಾತನಾಡಲಿ" ಎಂದು ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ವಿರೋಧ ಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ಉತ್ತೇಜನಕ್ಕೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಲಾಗಿದೆ. ರಾಮನಗರದಲ್ಲಿ ಯಾರು ನಿವೇಶನ ಖರೀದಿಸಿದ್ದಾರೆ ಎಂದು ಹೆಸರು ಬಹಿರಂಪಡಿಸಲಿ ಎಂಬ ವಿಜಯೇಂದ್ರ ಅವರ ಟೀಕೆ ಬಗ್ಗೆ ಕೇಳಿದಾಗ, "ಈ ರೀತಿ ಹೇಳುತ್ತಿರುವವರೆ ಇದನ್ನು ಬಹಿರಂಗಪಡಿಸಬೇಕಲ್ಲವೇ? ಅವರು ಸ್ಥಿಮಿತ ಇಲ್ಲದೆ ಮಾತನಾಡಿದರೆ ಅದಕ್ಕೆ ನಾನೇನು ಮಾಡಲು ಸಾಧ್ಯ? ರಾಮನಗರ ತಾಲೂಕು ಈ ಹಿಂದೆ ಕ್ಲೋಸ್ ಪೇಟೆ ಎಂದಿತ್ತು.

ಈ ವಿಚಾರ ವಿಜಯೇಂದ್ರ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನಾವು ರಾಮನಗರ ತಾಲೂಕಿನ ಹೆಸರನ್ನು ಬದಲಾವಣೆ ಮಾಡಿಲ್ಲ. ಬೆಂಗಳೂರು ಜಿಲ್ಲೆಯ ಭಾಗವಾಗಿದ್ದ ಈ ಪ್ರದೇಶವನ್ನು ಅದೇ ರೀತಿ ಮುಂದುವರಿಸಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಇಲ್ಲಿ ಬೇರೆಯವರ ಆಸ್ತಿ ಬರೆಸಿಕೊಳ್ಳುವ ಪ್ರಶ್ನೆ ಇಲ್ಲ. ಜಿಲ್ಲೆಯ ಹೆಸರಿನ ಮೇಲೆ ಅನಗತ್ಯ ರಾಜಕಾರಣ ಮಾಡುವುದನ್ನು ಬಿಟ್ಟು ನಿಮ್ಮ ಕಾಲದಲ್ಲಿ ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನೆಂದು ಹೇಳಿ" ಎಂದು ತಿರುಗೇಟು ನೀಡಿದರು. ಬೆಂಗಳೂರು ದಕ್ಷಿಣ ಎಂದು ಮರುನಾಮಕರಣದಿಂದ ರೈತರು, ಯುವಕರು ಸಂತೋಷಪಡುತ್ತಿದ್ದಾರೆ. ಬೆಂಗಳೂರು ಹೆಸರಿದ್ದರೆ ನಮ್ಮ ಕಾಲೇಜು ಹಾಗೂ ವಿವಿಗಳಿಗೆ ಗೌರವ ಸಿಗುತ್ತದೆ, ಉದ್ಯೋಗ ಸಿಗುತ್ತದೆ ಎಂದು ಭಾವಿಸಿದ್ದಾರೆ.

ಈ ವಿಚಾರದಲ್ಲಿ ಜನ ಸಂತೋಷವಾಗಿದ್ದಾರೆ. ಕೆಲವು ರಾಜಕಾರಣಿಗಳು ರಾಜಕೀಯಕ್ಕಾಗಿ ರಾಮನ ಹೆಸರು ಬಳಸುತ್ತಿದ್ದಾರೆ. ಇದನ್ನು ಬಿಟ್ಟು, ಅಭಿವೃದ್ಧಿಯ ಸಂಕೇತ ಇಟ್ಟುಕೊಂಡು ಬಿಜೆಪಿ ಅಧ್ಯಕ್ಷರು ಚರ್ಚೆ ಮಾಡಲಿ. ಅವರು ಕರ್ನಾಟಕ ಹಾಗೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು. ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗೆ ಅನುಮತಿ ನೀಡುವುದು ವಿಳಂಬ ಮಾಡುತ್ತಿರುವ ಅವರ ನಾಯಕರಿಗೆ ತಿಳಿ ಹೇಳಬೇಕು. ಇದು ಅವರ ಮುಖ್ಯ ಕರ್ತವ್ಯ. ನೀವು ರಾಮನಗರ ವಿಚಾರ ಬಿಟ್ಟು, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನೀವು ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಹರಿಸಿ" ಎಂದರು.

DK suresh
ವರ್ಷದಿಂದ ಅಪರಾಧಗಳ ಸಂಖ್ಯೆ ಕಡಿಮೆ: ಕುಮಾರಸ್ವಾಮಿ ರಾಮನಗರ ಜಿಲ್ಲೆ ರಚಿಸುವಾಗ ಇತಿಹಾಸದ ಬಗ್ಗೆ ಯೋಚಿಸಿರಲಿಲ್ಲವೇ?

ಹೆಸರು ಬದಲಾವಣೆ ಮಾಡಿ ಫಲಕಗಳಿಗೆ ಚಿನ್ನದ ತಗಡು ಹಾಕಿಸುತ್ತಾರಾ ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರಸ್ವಾಮಿ ಅವರು ಚಿನ್ನದ ತಗಡು ತಂದುಕೊಟ್ಟರೆ ಖಂಡಿತವಾಗಿಯೂ ಹಾಕಿಸುತ್ತೇವೆ. ಅವರು ಕೇಂದ್ರ ಸಚಿವರಾಗಿದ್ದಾರೆ. ನಮ್ಮ ಕನ್ನಡಿಗರ ಹಣ ಕೇಂದ್ರ ಸರ್ಕಾರದ ಬಳಿಯೇ ಇದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ರಾಜ್ಯಗಳಿಗೆ ನೀಡುತ್ತಿರುವುದು ಕನ್ನಡಿಗರ ಹಣವಲ್ಲವೇ? ನಮ್ಮ ರಾಜ್ಯದಿಂದ ಸಂಗ್ರಹವಾಗಿರುವ 5 ಲಕ್ಷ ಕೋಟಿ ತೆರಿಗೆ ಹಣವನ್ನು ಕೊಡಿಸಿದರೆ ಖಂಡಿತವಾಗಿ ಚಿನ್ನದ ತಗಡನ್ನೇ ಹಾಕಿಸೋಣ, ಅದಕ್ಕೆ ಅಭ್ಯಂತರವಿಲ್ಲ.

ಅವರ ಆಸೆಯನ್ನು ನಾವೇಕೆ ಬೇಡ ಎನ್ನಬೇಕು. ನಮ್ಮ ಹಣವನ್ನು ಉತ್ತರ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕುಮಾರಸ್ವಾಮಿ ಅವರು ಇಲ್ಲಿದ್ದಾಗ ಒಂದು ಮಾತಾಡುತ್ತಿದ್ದರು. ಈಗ ಬೇರೊಂದು ಮಾತು ಹೇಳುತ್ತಿದ್ದಾರೆ" ಎಂದು ಮಾತಿನಲ್ಲೇ ತಿವಿದರು. ರಾಮನಗರಕ್ಕೆ ಅದರದೇ ಆದ ಇತಿಹಾಸವಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, "ಹೌದು ಇತಿಹಾಸ ಇದೆ. ಕೆಂಗಲ್ ಹನುಮಂತಯ್ಯ ಅವರು ಇಲ್ಲಿಂದ ಮುಖ್ಯಮಂತ್ರಿ ಆಗಿದ್ದಾರೆ.

ಇವರ ಅಧಿಕಾರ ಅವಧಿಯಲ್ಲಿ ಕೆಂಗಲ್ ಹನುಮಂತಯ್ಯ ಅವರ ಒಂದೇ ಒಂದು ಪ್ರತಿಮೆ ಮಾಡಿದ್ದಾರಾ? ಅಧಿಕಾರದಲ್ಲಿದ್ದಾಗ ಅವರ ಹೆಸರು ಹೇಳಿದ್ದರಾ? ಈಗ ಯಾಕೆ ಅವರ ಹೆಸರು ಹೇಳುತ್ತಿದ್ದಾರೆ? ಸುಮ್ಮನೆ ಜನರನ್ನು ಎತ್ತಿಕಟ್ಟುವುದನ್ನು ಬಿಡಲಿ. ಅವರು ಕೇಂದ್ರ ಮಂತ್ರಿಯಾಗಿದ್ದು, ದೇಶಕ್ಕೆ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಅದನ್ನು ಮಾಡಿದರೆ ನಾವು ಸ್ವಾಗತಿಸುತ್ತೇವೆ" ಎಂದರು. ಇಂತಹ ಹೇಳಿಕೆಗಳು ಜನರನ್ನು ಗೊಂದಲಗೊಳಿಸುವುದಿಲ್ಲವೇ ಎಂದು ಕೇಳಿದಾಗ, "ಜನರು ಯಾರೂ ಗೊಂದಲದಲ್ಲಿಲ್ಲ. ರಾಜಕೀಯ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com