

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಂಗ ರಸ್ತೆಯನ್ನು ತೇಜಸ್ವಿ ಸೂರ್ಯ ಅವರು ಹಣ ಲೂಟಿ ಮಾಡುವ ಯೋಜನೆ ಎಂದು ಕರೆದಿದ್ದಾರೆ. ಮುಂಬೈನಲ್ಲಿ 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಿಸುತ್ತಿದ್ದಾರೆ. ಅಲ್ಲಿಯೂ ಹಣ ಹೊಡೆಯಲು ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರಗಳು ಮಾಡಿದರೆ ಅಭಿವೃದ್ಧಿ, ಕಾಂಗ್ರೆಸ್ ಸರ್ಕಾರ ಮಾಡಿದರೆ ಭ್ರಷ್ಟಾಚಾರ ಎಂಬುದು ಸರಿಯಲ್ಲ. ಸುರಂಗ ರಸ್ತೆಗಳಲ್ಲಿ ಕಾರುಗಳು ಸಂಚರಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಹಿಂದೆ ಸ್ಟೀಲ್ ಬ್ರಿಡ್ಜ್‌ಗೆ ಬಿಜೆಪಿಯವರು ವಿರೋಧಿಸಿ ಹೋರಾಟ ಮಾಡಿದ್ದರು. ಬೆಂಗಳೂರಿನಲ್ಲಿ ಯಾವುದೇ ಮೂಲಸೌಕರ್ಯ ಬರಬಾರದು ಎಂಬುದು ಅವರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.
ಬೆಂಗಳೂರಿನ ಸಂಚಾರ ಸಮಸ್ಯೆಗಳನ್ನು ಪರಿಹರಿಸಲು ಸುರಂಗ ರಸ್ತೆ ಅಗತ್ಯ ಎಂದು ಗಡ್ಕರಿ ಹೇಳಿದ್ದರು. ನಿತಿನ ಗಡ್ಕರಿ ಮೋದಿ ಸರ್ಕಾರದಲ್ಲಿ ಹೆಚ್ಚು ಅನುಭವಿ ಸಚಿವರು. ತೇಜಸ್ವು ಸೂರ್ಯ ಗಡ್ಕರಿಗಿಂತ ಹೆಚ್ಚು ಬುದ್ಧಿವಂತ, ಪ್ರತಿಭಾನ್ವಿತರೇ? ಎಂದು ಪ್ರಶ್ನಿಸಿದರು.
ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ತೇಜಸ್ವಿ ಸೂರ್ಯ ಯುವಕರನ್ನು ದಾರಿ ತಪ್ಪಿಸುವ ಕೋಮುವಾದಿ ಅಜೆಂಡಾದಲ್ಲಿ ತೊಡಗಿದ್ದರು. ಅಭಿವೃದ್ಧಿ ಬಗ್ಗೆ ಎಂದೂ ಮಾತನಾಡಲಿಲ್ಲ. ಟ್ರಾಫಿಕ್ ಸಮಸ್ಯೆ ಪರಿಹರಿಸುವ ಬಗ್ಗೆ ಯೋಚನೆಯೇ ಮಾಡಲಿಲ್ಲ. ಪೆರಿಫೆರಲ್ ರಿಂಗ್ ರೋಡ್ ಬಗ್ಗೆಯೂ ಅವರು ಧ್ವನಿ ಎತ್ತಿಲ್ಲ. ಮೆಟ್ರೋ ಡಬಲ್ ಡೆಕ್ಕರ್ ಕಲ್ಪನೆಯೂ ಅವರಿಗೆ ಹೊಳೆದಿರಲಿಲ್ಲ. 40 ತಿಂಗಳೊಳಗೆ ಸಬರ್ಬನ್ ರೈಲು ಮಾಡುತ್ತೇವೆ ಎಂಬ ಪ್ರಧಾನಿ ಮೋದಿ ಅವರ ಭರವಸೆ ಭರವಸೆಯಾಗಿಯೇ ಉಳಿದಿದೆ. ಕೋಚ್‌ಗಳ ಪೂರೈಕೆ ಇಲ್ಲದೆ ಮೆಟ್ರೋ ವಿಸ್ತರಣೆ ಮಾರ್ಗ ವಿಳಂಬವಾಗಿತ್ತು. ಈ ಬಗ್ಗೆ ತೇಜಸ್ವಿ ಸೂರ್ಯ ಯಾವ ಪ್ರಯತ್ನ ಮಾಡಿದ್ದರು ಎಂದು ಪ್ರಶ್ನಿಸಿದರು.
Advertisement