

ಬೆಂಗಳೂರು: ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯನ್ನು ಗಮನಿಸಿದ್ದೇನೆ. ಅವರ ಹೇಳಿಕೆ ಬೇಜವಾಬ್ದಾರಿತನವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾ? ಅಥವಾ ಡಿ.ಕೆ. ಶಿವಕುಮಾರ್ ಅವರಾ? ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ರಸ್ತೆ ಗುಂಡಿಗಳ ಬಗ್ಗೆ ಕೇಳಿದ್ದಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಬೇಜವಾಬ್ದಾರಿಯ ಪರಮಾವಧಿ ಎಂದು ಕಿಡಿಕಾರಿದರು.
ಸಿಎಂ ಹೇಳಿಕೆ ನೋಡಿದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅಸಮರ್ಥನಾಗಿದ್ದೇನೆಂದು ಹೇಳಿದ ರೀತಿ ಇದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಾ ಅಥವಾ ಡಿಕೆ.ಶಿವಕುಮಾರ್ ಅವರಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಸಿಎಂ ಸಭೆ ಮಾಡಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದರು. ಆದರೆ, ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಅಧಿಕಾರಿಗಳು ಇವರ ಮಾತಿಗೆ ಎಷ್ಟು ಬೆಲೆ ಕೊಡುತ್ತಿದ್ದಾರೆಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಾತಿ ಗಣತಿ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯದ ಜನರ ಕಲ್ಯಾಣಕ್ಕಾಗಿ ಅಲ್ಲದೆ, ತಮ್ಮ ಗುಪ್ತ ಕಾರ್ಯಸೂಚಿಗಾಗಿ ಮಾಡಿದ ಸಮೀಕ್ಷೆಯಾಗಿದೆ ಎಂದು ಕಿಡಿಕಾರಿದರು.
ಸಮೀಕ್ಷೆಯಿಂದ ಸರ್ಕಾರ ಏನು ಸಾಧಿಸುತ್ತದೆ. ಜನರು ಅದಕ್ಕೆ ಎಷ್ಟರ ಮಟ್ಟಿಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಜಾತಿಗಳಲ್ಲಿಯೂ ಬಡವರು ಮತ್ತು ಅನಕ್ಷರಸ್ಥರು ಇದ್ದಾರೆ. ಸರ್ಕಾರ ಮೊದಲು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಬೇಕು. ರಾಜ್ಯದಲ್ಲಿ ಶಾಲೆಗಳು, ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಕರ ಕೊರತೆ ತುಂಬಾ ಇದೆ ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿ ಕುರಿತು ಮಾತನಾಡಿ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಮನೆಗಳ ಮುಂದೆ ಕಸ ಸುರಿಯುವುದು ಸರಿಯಲ್ಲ. ಕಸ ವಿಲೇವಾರಿಗೆ ಸೂಕ್ತ ಜಾಗ ಇಲ್ಲ. ಹೀಗಾಗಿ ಮನೆಗಳ ಮುಂದೆ ತಂದು ಹಾಕಿದರೆ ಜನರೇ ಕಸ ವಿಲೇ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಇರಬಹುದು. ಆ ಉದ್ದೇಶದಿಂದ ಸರಕಾರ ಮನೆಗಳ ಮುಂದೆ ಕಸ ಸುರಿಯುವ ವಿನೂತನ ಕಾರ್ಯಕ್ರಮ ಮಾಡಿದೆ ಎಂದು ಟೀಕಿಸಿದರು.
Advertisement