

ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜನತಾ ದಳ ಸೆಕ್ಯುಲರ್ (ಜೆಡಿಎಸ್) ಪಕ್ಷ ಅಸ್ತಿತ್ವಕ್ಕೆ ಬಂದು 25 ವರ್ಷಗಳಾಗಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ಸಂಭ್ರಮದಲ್ಲಿದ್ದಾರೆ. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಂಡಿರುವ ನಿರ್ಧಾರ ಹಿರಿಯ ನಾಯಕ ಜಿಟಿ ದೇವೇಗೌಡ ಅವರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಕೋರ್ ಕಮಿಟಿಯನ್ನು ಪುನಾರಚನೆ ಮಾಡಿದ್ದು, ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡ ಅವರನ್ನು ವಜಾಗೊಳಿಸಲಾಗಿದೆ. ಚಿಂತಾಮಣಿಯ ಮಾಜಿ ಶಾಸಕ ಹಾಗೂ ಮಾಜಿ ಡೆಪ್ಯುಟಿ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕರಾಗಿ ಆಯ್ಕೆಗೊಂಡಿದ್ದಾರೆ.
ನೂತನ ಕೋರ್ ಕಮಿಟಿ ಸದಸ್ಯರು
ಮಾಜಿ ಶಾಸಕ ರಾಜವೆಂಕಟಪ್ಪ ನಾಯಕ ದೊರೆ, ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಆಲ್ಕೋಡ ಹನುಮಂತಪ್ಪ, ಹೆಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಕೆ.ಎಂ. ತಿಮ್ಮರಾಯಪ್ಪ, ಎ. ಮಂಜುನಾಥ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೆ.ಜಿ. ಪ್ರಸನ್ನಕುಮಾರ್, ಶಾಸಕರಾದ ಕರೆಮ್ಮ ನಾಯಕ, ನೇಮಿರಾಜ ನಾಯಕ, ಸಮೃದ್ಧಿ ಮಂಜುನಾಥ್, ಶರಣುಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಹಿರಿಯ ನಾಯಕ ಸಿ.ವಿ. ಚಂದ್ರಶೇಖರ್ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕರಾಗಿ ಮಾಜಿ ಸಚಿವ ಕುಣಿಗಲ್ ಕ್ಷೇತ್ರದ ಮಾಜಿ ಶಾಸಕ ಡಿ. ನಾಗರಾಜಯ್ಯರನ್ನು ನೇಮಕ ಮಾಡಲಾಗಿದ್ದರೆ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ವೈ ಎಸ್ ವಿ ದತ್ತ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದು ಪದೇ ಪದೇ ಕಾಂಗ್ರೆಸ್ ಜೊತೆ ಕಾಣಿಸಿಕೊಂಡು ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರನ್ನು ಜಿಟಿ ದೇವೇಗೌಡ ಹಾಡಿಹೊಗಳುವ ಮೂಲಕ ಜಿಟಿ ದೇವೇಗೌಡ ಇತ್ತೀಚೆಗೆ ಸುದ್ದಿಯಲ್ಲಿದ್ದರು. ತಮ್ಮ ಹೇಳಿಕೆಗಳ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು. ಈ ಬೆಳವಣಿಗೆ ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿತ್ತು.
ಈ ಹಿಂದೆಯೂ ಸಹ ಕುಮಾರಸ್ವಾಮಿ ಹಾಗೂ ಜಿಟಿ ದೇವೇಗೌಡ ನಡುವೆ ಮುಸುಕಿನ ಗುದ್ದಾಟ ಇತ್ತು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮಧ್ಯೆ ಪ್ರವೇಶಿಸಿ ಜಿಟಿಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
Advertisement