

ಬೆಂಗಳೂರು: ಮಂಗಳೂರಲ್ಲಿ ಬಿಜೆಪಿಯವರ ಪ್ರಚೋದನಕಾರಿ ಭಾಷಣಕ್ಕೆ ಅದೆಷ್ಟೋ ಯುವಕರು ಬಾಳು ಹಾಳು ಮಾಡಿಕೊಂಡಿದ್ದಾರೆ. ಇವರ ಮಕ್ಕಳು ಯಾವತ್ತಾದರೂ ತ್ರಿಶೂಲ ಹಿಡಿಯುತ್ತಾರಾ? ಬೀದಿಗೆ ಬಂದು ಹೋರಾಟ ಮಾಡಿದ್ದನ್ನು ನೋಡಿದ್ದೀರಾ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀವು ಜೈಲು ಸೇರಿದ್ರೆ ನಿಮ್ಮ ಅಪ್ಪ-ಅಮ್ಮ ಬೇಲ್ ಕೊಡಿಸಲು ಬರಬೇಕು. ಬಿಜೆಪಿ ನಾಯಕರು ಕಳ್ಳರು, ಡೋಂಗಿಗಳು. ಅವರ ನಾಲಿಗೆ ಮೇಲಷ್ಟೇ ಶ್ರೀರಾಮ ಇರೋದು. ಆದರೆ ನಮ್ಮ ಹೃದಯದಲ್ಲಿ ರಾಮ ಇದ್ದಾನೆ ಎಂದು ಅವರು ಹೇಳಿದ್ದಾರೆ. ನೈರುತ್ಯ ಮುಂಗಾರಿನಿಂದ ಸಾಕಷ್ಟು ಭಾಗಗಳಲ್ಲಿ ಪ್ರವಾಹ ಹಾನಿ ಉಂಟಾಗಿದ್ದರೂ, ಕೇಂದ್ರದಿಂದ ಸರಿಯಾದ ಪರಿಹಾರ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನೈರುತ್ಯ ಮುಂಗಾರಿನಿಂದ ಕರ್ನಾಟಕದಲ್ಲಿ ವ್ಯಾಪಕ ಪ್ರವಾಹ ಹಾನಿ ಉಂಟಾಗಿರುವ ನಡುವೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೀಡಿರುವ ಪರಿಹಾರ ಕಡಿಮೆ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಪ್ರದೀಪ್ ಈಶ್ವರ್, ರಾಜ್ಯ ಸರ್ಕಾರ ಕೇಂದ್ರದ SDRF ನಿಂದ ಪರಿಹಾರ ನೀಡುವಂತೆ ಕೋರಿದೆ. ಆದರೆ, ಮಹಾರಾಷ್ಟ್ರಕ್ಕೆ 1556 ಕೋಟಿ ರೂಪಾಯಿಗಳನ್ನು ನೀಡಿದ್ದರೆ, ಕರ್ನಾಟಕಕ್ಕೆ ಕೇವಲ 384 ಕೋಟಿಗಳನ್ನು ಮಾತ್ರ ನೀಡಲಾಗಿದೆ. ಇದನ್ನು ದೊಡ್ಡ ಸಾಧನೆ ಎಂಬಂತೆ ಆರ್. ಅಶೋಕ ಅವರು ಟ್ವೀಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಪರಿಹಾರ ಕೇಳಿದರೆ, ಅಶೋಕ್ ಅವರು ಕಾಂಗ್ರೆಸ್ ಸಂಸದರನ್ನು ಕೇಳಿ ಎಂದು ಹೇಳುತ್ತಾರೆ. ಹಾಗಾದ್ರೆ NDA ಗೆದ್ದಿರುವ 19 ಸಂಸದರು ಇಂಡಿಯಾ ಗೇಟ್‌ನಲ್ಲಿ ಕಾಯೋಕೆ ಇದ್ದಾರೆಯೇ? ಎಂದು ಟೀಕಿಸಿದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಪರಿಹಾರ ಕೇಳುತ್ತಿಲ್ಲ, ರಾಜ್ಯಕ್ಕಾಗಿ ಕೇಳುತ್ತೇವೆ ಎಂದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ಅವರ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರು ಹಿರಿಯರು. ಅವರಿಗೆ ನಾವು ಆ ಪದ ಬಳಸಲ್ಲ. ಆ ಪದದ ಅರ್ಥದಲ್ಲೇ ಬಿಜೆಪಿ ಅವರನ್ನು ಪಕ್ಷದಿಂದ ಹೊರಹಾಕಿದೆ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಕುಮಾರಸ್ವಾಮಿ ಅವರಿಗೆ RSS ಬಗ್ಗೆ ಇರುವ ನಿಲುವು ಕುರಿತು ಪ್ರಶ್ನಿಸಿದ ಶಾಸಕ ಪ್ರದೀಪ್ ಈಶ್ವರ್, RSS ಬೈದು ಸಂಪಾದಕೀಯ ಕಾಲಂ ಬರೆದಿದ್ದ ನಿಮ್ಮ ನಿಲುವೇನೂ. RSS ಬಗ್ಗೆ JDS ನಿಲುವೇನೂ ತಿಳಿಸಬೇಕು. JDS ನಲ್ಲಿರುವ S ಅಂದರೆ ಜಾತ್ಯಾತೀತವೋ, ಕೇಸರಿಯೋ ಹೇಳಬೇಕು. S ಅಂದರೆ ಅಧಿಕಾರ ಬೇಕು ಅಂದರೆ ಯಾರ ಜೊತೆಗೆ ಬೇಕಾದರೆ ಹೋಗುವುದೇನು? ಲೇವಡಿ ಮಾಡಿದರು.
Advertisement