

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ತರಹದ ಭತ್ಯೆಯನ್ನು ಸ್ವೀಕರಿಸದಿರಲು ನಿರ್ಧಾರಿಸಿದ್ದೇನೆ ಎಂದು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಬುಧವಾರ ಹೇಳಿದ್ದಾರೆ.
ಈ ಸಂಬಂಧ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ಬರೆದಿರುವ ಅವರು, ಅಧಿವೇಶನದಲ್ಲಿ ಭಾಗವಹಿಸಿದಾಗ ಸರ್ಕಾರ ನೀಡುವ ಟಿಎ, ಡಿಎ, ವಸತಿ ವ್ಯವಸ್ಥೆ ಪಡೆಯುವುದಿಲ್ಲ. ಕಲಾಪದ ವೇಳೆ ಚಹಾ, ಉಪಾಹಾರ, ಊಟವೂ ಮಾಡದೆ ಹೊರಗಿನಿಂದ ತರಿಸಿಕೊಳ್ಳುತ್ತೇನೆಂದು ಹೇಳಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗೆ ಧ್ವನಿಯಾಗಲು ಬೆಳಗಾವಿಯ ಅಧಿವೇಶನಕ್ಕೆ ಪ್ರತಿ ವರ್ಷ ಸುಮಾರು 30 ಕೋಟಿ ರೂ. ವೆಚ್ಚವಾಗುತ್ತಿದೆ. ಇದರಿಂದ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಅಧಿವೇಶನಗಳಲ್ಲಿ ನಡೆದ ಚರ್ಚೆಗಳ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆಯೂ ಇದುವರೆಗೂ ಜನರಿಗೆ ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ರೈತರು, ಬಡವರು, ಕಾರ್ಮಿಕರು ಮತ್ತು ಜನ ಸಾಮಾನ್ಯರು ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಭಿವೃದ್ಧಿ, ಅನುದಾನದ ಭರವಸೆ ಇರಿಸಿಕೊಂಡಿದ್ದಾರೆ. ಅಧಿವೇಶನದಲ್ಲಿ ಮಾತನಾಡಿ ಕಾಡಿ, ಬೇಡಿ ಹೋಗುವುದೇ ಆಗುತ್ತಿದೆ. ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ.
ಎರಡು ವಾರಗಳ ಕಾಲ ಪ್ರವಾಸಕ್ಕೆ ಬಂದಂತೆಯೇ ಆಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಕೇವಲ ಚರ್ಚೆ, ಮಾತುಗಳಿಂದ ಜನ ಕಲ್ಯಾಣ ಅಸಾಧ್ಯ. ಉತ್ತರ ಕರ್ನಾಟಕದ ರೈತರು, ಬಡವರು, ಕಾರ್ಮಿಕರು ಮತ್ತು ಜನಸಾಮಾನ್ಯರು ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ಧಾರೆ.
ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಅನುದಾನ ತರುತ್ತಾರೆ ಎಂಬ ಆಶಾಭಾವನೆ ಹೊಂದಿರುತ್ತಾರೆ, ಮುಂಗಾರು ಮಳೆ ಮತ್ತು ಪ್ರವಾಹದಿಂದ ಲಕ್ಷಾಂತರ ರೈತರ ಕೋಟ್ಯಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಆದರೂ ರಾಜ್ಯ ಸರ್ಕಾರ ಇದುವರೆಗೆ ಒಂದು ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
Advertisement