

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ನಡೆಯುತ್ತಿರುವ ನಾಯಕತ್ವದ ಹಗ್ಗಜಗ್ಗಾಟವು ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್‌ನೊಳಗಿನ ರಾಜಕೀಯ ಬಿರುಗಾಳಿಯನ್ನು ತೀವ್ರಗೊಳಿಸಿದೆ.
ಸಿದ್ದರಾಮಯ್ಯ ಪಾಳಯವು ಶಿವಕುಮಾರ್ ಅವರ ವಿರುದ್ಧ ಪ್ರತಿತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಇತ್ತೀಚಿನ ಸಭೆಯಲ್ಲಿ, ಸಿದ್ದರಾಮಯ್ಯ ಅವರು ಎರಡು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸುವ ಪ್ರಸ್ತಾಪವನ್ನು ಮಂಡಿಸಿದ್ದಾರೆ ಎಂದು ವರದಿಯಾಗಿದೆ, ಇದು ಶಿವಕುಮಾರ್ ಅವರ ಪ್ರಭಾವವನ್ನು ದುರ್ಬಲಗೊಳಿಸುವ ಮತ್ತು ಅವರ ಬೆಳೆಯುತ್ತಿರುವ ಆಕಾಂಕ್ಷೆಗಳನ್ನು ನಿಗ್ರಹಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಮೌನವಾಗಿದ್ದರೂ, ಬೆಂಗಳೂರು ಮತ್ತು ದೆಹಲಿಯಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ, ಶಿವಕುಮಾರ್ ಅವರನ್ನು ಬೆಂಬಲಿಸುವ 10 ಕ್ಕೂ ಹೆಚ್ಚು ಶಾಸಕರು ನಾಯಕತ್ವ ಬದಲಾವಣೆಗೆ ಒತ್ತಾಯಿಸಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಪ್ರಮುಖ ದಲಿತ ನಾಯಕರು ಸಭೆ ನಡೆಸಿ, ದಲಿತ ಮುಖ್ಯಮಂತ್ರಿ ಬೇಡಿಕೆಯನ್ನು ಎತ್ತಿ ಹಿಡಿಯಲು ಸಂಘಟಿತ ಪ್ರಯತ್ನ ನಡೆಯುತ್ತಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಹುಸೇನ್ ಮತ್ತು ಶಿವಗಂಗಾ ಬಸವರಾಜ್ ಸೇರಿದಂತೆ ಶಾಸಕರ ಮತ್ತೊಂದು ತಂಡ ಶೀಘ್ರದಲ್ಲೇ ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ಸಚಿವರಾದ - ಕೆ ಎನ್ ರಾಜಣ್ಣ, ವೆಂಕಟೇಶ್, ಡಾ ಜಿ ಪರಮೇಶ್ವರ ಮತ್ತು ಎಚ್ ಸಿ ಮಹಾದೇವಪ್ಪ - ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಪ್ರತ್ಯೇಕ ಭೋಜನ ಸಭೆ ನಡೆಸಿದರು.
"ದೆಹಲಿ ಒತ್ತಡ"ವನ್ನು ಎದುರಿಸುವುದು ಸೇರಿದಂತೆ ಮೂರು ನಿರ್ಣಾಯಕ ಕಾರ್ಯಸೂಚಿಯ ಅಂಶಗಳನ್ನು ಸಚಿವರು ಚರ್ಚಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿದವು. ಶಿವಕುಮಾರ್ ಅವರ ನಿಷ್ಠಾವಂತರಿಂದ ದೆಹಲಿ ಪರೇಡ್‌ನ ಅಗತ್ಯವನ್ನು ಈ ನಾಯಕರ ತಂಡ ಪ್ರಶ್ನಿಸಿದೆ, ನಾಯಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಶಿವಕುಮಾರ್ ಅವರ ಬೆಂಬಲಿಗರು ಪಕ್ಷದ ಶಿಸ್ತನ್ನು ಮೀರಿ ವರ್ತಿಸುತ್ತಿದ್ದಾರೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು ಮತ್ತು ಹೈಕಮಾಂಡ್ ಮುಂದೆ ಈ ವಿಷಯವನ್ನು ಔಪಚಾರಿಕವಾಗಿ ಪ್ರಸ್ತಾಪಿಸಲು ನಿರ್ಧರಿಸಿದರು.
ಕಾಂಗ್ರೆಸ್ ಹೈಕಮಾಂಡ್ , ಅಧಿಕಾರ ಹಂಚಿಕೆ ವ್ಯವಸ್ಥೆಯನ್ನು ಪರಿಗಣಿಸುತ್ತಿದ್ದರೆ, ಶಿವಕುಮಾರ್ ಬದಲಿಗೆ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ವರ್ಗಾಯಿಸಬೇಕು ಎಂದು ಸಚಿವರ ಗುಂಪು ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಅಧಿಕಾರ ಹಂಚಿಕೆ ಆದರೆ ದಲಿತ ನಾಯಕನನ್ನು ಸಿಎಂ ಮಾಡಬೇಕೇ ಹೊರತು, ಡಿಕೆ ಶಿವಕುಮಾರ್ ಅವರನ್ನಲ್ಲ ಎಂದು ಸಚಿವರು ಸರ್ವಾನುಮತದಿಂದ ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬದಲಾವಣೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ಕಾಂಗ್ರೆಸ್ ರಾಜಕೀಯ ಮಹತ್ವಾಕಾಂಕ್ಷೆಗಳು, ಜಾತಿ ಚಲನಶೀಲತೆ ಮತ್ತು ಆಡಳಿತ ಸ್ಥಿರತೆಯನ್ನು ಸಮತೋಲನಗೊಳಿಸುತ್ತಿದೆ. ಈ ಎಲ್ಲಾ ಅಂಶಗಳು ಮುಂದಿನ ಕೆಲವು ದಿನಗಳು ಕರ್ನಾಟಕದ ರಾಜಕೀಯ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕವಾಗುವ ನಿರೀಕ್ಷೆಯಿದೆ. ಹೈಕಮಾಂಡ್ ಮಧ್ಯಪ್ರವೇಶಿಸುತ್ತದೆಯೇ ಅಥವಾ ಆಂತರಿಕ ಯುದ್ಧವು ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಸದ್ಯ ಕಾದು ನೋಡಬೇಕಾಗಿದೆ.
Advertisement