

ಚಿಕ್ಕಬಳ್ಳಾಪುರ: ನಾನು ಹುದ್ದೆಯಲ್ಲಿ ಮುಂದುವರಿಯಬೇಕೆಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ನಾನು ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧರಿಸುತ್ತದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ತಲುಪಿದ ನಂತರ, 2023ರಲ್ಲಿ ಸರ್ಕಾರ ರಚನೆಯ ವೇಳೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ 'ಅಧಿಕಾರ ಹಂಚಿಕೆ' ಒಪ್ಪಂದದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳ ನಡುವೆ ಆಡಳಿತ ಪಕ್ಷದೊಳಗಿನ ಜಗಳ ತೀವ್ರಗೊಂಡಿದೆ.
'ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಅವರು ನಾನು (ಮುಖ್ಯಮಂತ್ರಿಯಾಗಿ) ಮುಂದುವರಿಯಬೇಕೆಂದು ನಿರ್ಧರಿಸಿದರೆ, ನಾನು ಮುಂದುವರಿಯುತ್ತೇನೆ. ಅಂತಿಮವಾಗಿ, ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ, ಅದನ್ನು ನಾನು ಒಪ್ಪಿಕೊಳ್ಳಬೇಕು. ಶಿವಕುಮಾರ್ ಕೂಡ ಅದನ್ನು ಒಪ್ಪಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ಕೇಳಿದಾಗ, 'ಆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ನಾನು ಹೇಳಿದರೂ, ನೀವು (ವರದಿಗಾರರು) ಮತ್ತೆ ಅದೇ ವಿಷಯವನ್ನು ಏಕೆ ಕೇಳುತ್ತಿದ್ದೀರಿ' ಎಂದು ಹೇಳಿದರು.
ನಾಲ್ಕೈದು ತಿಂಗಳ ಹಿಂದೆ, ಹೈಕಮಾಂಡ್ ಸಂಪುಟ ಪುನರ್ ರಚನೆಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ಸರ್ಕಾರ 2.5 ವರ್ಷಗಳ ಅಧಿಕಾರ ಪೂರ್ಣಗೊಳಿಸಲಿ ಎಂದು ಸೂಚಿಸಿದ್ದರು ಎಂದ ಸಿಎಂ, 'ಈಗ ನಾವು ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದನ್ನು ಅನುಸರಿಸುತ್ತೇವೆ' ಎಂದು ಹೇಳಿದರು.
ಎರಡೂವರೆ ವರ್ಷಗಳ ಸರ್ಕಾರದ ನಂತರ ಅಧಿಕಾರ ಹಂಚಿಕೆಯ ಒಪ್ಪಂದವಾಗಿತ್ತೇ ಎಂದು ಕೇಳಿದಾಗ, 'ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ' ಎಂದು ಮಾತ್ರ ಹೇಳಿದರು.
ಸಿದ್ದರಾಮಯ್ಯ ಶನಿವಾರ ಬೆಂಗಳೂರಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.
Advertisement