

ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆಯ ಗೊಂದಲ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಆರ್ ಅಶೋಕ್ ಅವರು, ಪ್ರಸ್ತುತ ಸರ್ಕಾರ ಶೇ. 60 ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
"ಕಳೆದ ಎರಡು ವರ್ಷಗಳಿಂದ, ಅಧಿಕಾರ ಮತ್ತು ಸಿಎಂ ಕುರ್ಚಿಗಾಗಿ ಜಗಳ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿರುವುದರಿಂದ ಶಾಸಕರ ಖರೀದಿ ನಡೆಯುತ್ತಿದೆ ಎಂದು ವರದಿಗಳಿವೆ" ಎಂದು ಆರ್ ಅಶೋಕ ಹೇಳಿದರು.
ರಾಜ್ಯ ಸರ್ಕಾರವು ಪ್ರತಿಯೊಂದು ವ್ಯವಹಾರ ನಡೆಸಲು ಶೇ.60 ರಷ್ಟು ಲಂಚ ಸಂಗ್ರಹಿಸುತ್ತಿದೆ ಎಂದು ಆರ್ ಅಶೋಕ್ ಆರೋಪಿಸಿದರು.
"ಕರ್ನಾಟಕದಲ್ಲಿ ನಮಗೆ ಚುನಾವಣೆ ಬೇಕು. ಏಕೆಂದರೆ ರಾಜ್ಯದಲ್ಲಿ ಶೇ.60 ರಷ್ಟು ಭ್ರಷ್ಟ ಸರ್ಕಾರವಿದೆ. ಈ ಸರ್ಕಾರ ತೊಲಗಬೇಕು" ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾವುದೇ ಅಧಿಕಾರವಿಲ್ಲ. ಸೋನಿಯಾ ಗಾಂಧಿಯವರ ಬಳಿ ಮಾತ್ರ ಅಧಿಕಾರ ಇದೇ. ಎಐಸಿಸಿ ಅಧ್ಯಕ್ಷರ ಬಳಿ ಯಾವುದೇ ಅಧಿಕಾರವಿಲ್ಲ" ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ತಾವು ಅಧ್ಯಕ್ಷ ಅನ್ನೋದನ್ನೇ ಮರೆತಿದ್ದಾರೆ. ಹೆಸರಿಗೆ ಮಾತ್ರ ಅವರು ಅಧ್ಯಕ್ಷರು, ಅವರ ಕೀ ಇರೋದು ಗಾಂಧಿ ಫ್ಯಾಮಿಲಿ ಬಳಿ ಎಂದು ವ್ಯಂಗ್ಯವಾಡಿದರು.
ಶಾಸಕರ ಖರೀದಿಗೆ 100 ಕೋಟಿ ಆಫರ್; ಕಾರು, ಫ್ಲ್ಯಾಟು ಗಿಫ್ಟು
100 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುವ ಕೆಟ್ಟ ವ್ಯವಸ್ಥೆ ಹಿಂದೆಂದೂ ಕಂಡಿರಲಿಲ್ಲ. ಈಗ 100 ಕೋಟಿ ರೂಪಾಯಿ ವರೆಗೆ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರ್. ಅಶೋಕ್ ಕಿಡಿ ಕಾರಿದರು.
ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರನಾ? ಅಥವಾ ಸಮ್ಮಿಶ್ರ ಸರ್ಕಾರನಾ? ಅನ್ನೋ ಅನುಮಾನ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಒಬ್ಬೊಬ್ಬರು ಶಾಸಕರ ಖರೀದಿಗೆ 60 ರಿಂದ 100 ಕೋಟಿ ರೂ. ಕೊಡಲಾಗ್ತಿದೆ. ಜೊತೆಗೆ ಕಾರು, ಫ್ಲ್ಯಾಟು ಗಿಫ್ಟ್ ಕೊಡುತ್ತಿದ್ದಾರೆ. ಮುಂದೆ ಇದನ್ನ ಜನರ ತಲೆ ಮೇಲೆ ಹಾಕ್ತಾರೆ, ಇದೆಲ್ಲವನ್ನ ಜನರ ಮುಂದೆ ಇಡ್ತೇವೆ ಎಂದು ವಾಗ್ದಾಳಿ ನಡೆಸಿದರು.
ರೈತರ ಆತ್ಮಹತ್ಯೆ; ಸರ್ಕಾರದ ವಿರುದ್ಧ ಹೋರಾಟ
ರೈತರ ಆತ್ಮಹತ್ಯೆಯ ವಿಷಯದ ಕುರಿತು ನವೆಂಬರ್ 27, 28 ಮತ್ತು ಡಿಸೆಂಬರ್ 1 ಮತ್ತು 2 ರಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಲಿವೆ ಎಂದು ಅವರು ಹೇಳಿದರು.
ಎಎನ್‌ಐ ಜೊತೆ ಮಾತನಾಡಿದ ಆರ್. ಅಶೋಕ್, ರೈತರ ಆತ್ಮಹತ್ಯೆಯ ವಿಷಯದ ಕುರಿತು "ನವೆಂಬರ್ 27-28 ಮತ್ತು ಡಿಸೆಂಬರ್ 1-2 ರಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತೇವೆ. 2000ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಅವರು ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ. ಕಬ್ಬಿಗೆ, ರೈತರಿಗೆ ಯಾವುದೇ ಮೊತ್ತವನ್ನು ಪಾವತಿಸಿಲ್ಲ. ನಾವು ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ಮಾಡುತ್ತೇವೆ" ಎಂದರು.
ಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಟ ನಡೆಯುತ್ತಿರುವುದರಿಂದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಸರ್ಕಾರದ ರೈತರ ವಿರೋಧಿ ನಿಲುವಿನ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
Advertisement