

ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿದ್ದಕ್ಕೆ ಮೂಲಕ ಕಾರಣವೇ ಡಿಕೆ.ಶಿವಕುಮಾರ್. ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರ ಕೆಡವಿದೆ. ಡಿಕೆ.ಶಿವಕುಮಾರ್ ಬಿಜೆಪಿಗೆ ಬಂದರೆ ಒಪ್ಪುವುದಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿಯವರು ಸೋಮವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಸಮ್ಮಿಶ್ರ ಸರ್ಕಾರ ಪತನಗೊಂಡಿತು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಅವರ ಮಾತಿಗೆ ಕೌಂಟರ್ ಕೊಡಲು ಆಗುವುದಿಲ್ಲ. ಆದರೆ, ಸಮ್ಮಿಶ್ರ ಸರ್ಕಾರ ಪತನಕ್ಕೆ ಮೂಲಕಾರಣ ಡಿಕೆ.ಶಿವಕುಮಾರ್. ಬೆಳಾವಿಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರವನ್ನು ಕೆಡವಿದೆ. ಆಪರೇಷನ್ ಕಮಲದ ಮೂಲ ಸೂತ್ರದಾರ ನಾನೇ. ಕುಮಾರಸ್ವಾಮಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣವಲ್ಲ. ಮೂಲ ಕಾರಣ ಡಿ.ಕೆ.ಶಿವಕುಮಾರ್ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರಿಂದಲೇ ಸರಕಾರ ಪತನವಾಯಿತು ಎನ್ನುವುದು ರಾಜ್ಯದ ಚಿಕ್ಕಮಕ್ಕಳಿಗೂ ಗೊತ್ತಿದೆ. ಡಿ.ಕೆ.ಶಿವಕುಮಾರ್ ಶಾಸಕರ ಸಂಖ್ಯಾಬಲದಲ್ಲಿ ದುರ್ಬಲರಿದ್ದಾರೆ. ಡಿ.ಕೆ.ಶಿವಕುಮಾರ್ 50 ಶಾಸಕರ ಸಂಖ್ಯಾಬಲ ತೋರಿಸಿದರೆ ಇವತ್ತೇ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ. ಆದರೆ. ಅವರಿಗೆ ಶಾಸಕರ ಬೆಂಬಲವಿಲ್ಲ ಎಂದರು.
ನಾಯಕತ್ವ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಯಾರನ್ನೇ ಸಿಎಂ ಮಾಡಿಕೊಳ್ಳಲಿ, ಅದಕ್ಕೆ ನಮಗೆ ಸಂಬಂಧವಿಲ್ಲ. ನಾನು ಕಾಂಗ್ರೆಸ್‌ನಲ್ಲಿ ಇದ್ದಾಗ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಹೇಳಿದ್ದೆ. ಈಗ ನಾನು ಬಿಜೆಪಿಯಲ್ಲಿ ಇದ್ದೇನೆ. ಇವತ್ತಿನ ಸನ್ನಿವೇಶದಲ್ಲಿ ಅದನ್ನು ಕೇಳುವುದು ಸರಿಯಲ್ಲ ಎಂದರು.
ಡಿಕೆ ಶಿವಕುಮಾರ್ ಎಂದಾದರೂ ಬಿಜೆಪಿಗೆ ಬರಲು ನಿರ್ಧರಿಸಿದರೆ ನಾವು ಅವರನ್ನು ಸ್ವಾಗತಿಸುವುದಿಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ ಎಂದು ಹೇಳಿದರು.
ಇದೇ ವೇಳೆ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಂದಿನ ಎರಡೂವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮುಂದುವರಿಯುತ್ತದೆ. ಜನರು ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದರು.
ಇತ್ತೀಚೆಗೆ ನಡೆದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆಗಳಲ್ಲಿ ಸತೀಶ್ ಜಾರಕಿಹೊಳಿ ಹೆಬ್ಬಾಳ್ಕರ್ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂಬ ವರದಿ ಕುರಿತು ಪ್ರತಿಕ್ರಿಯಿಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಯಾವುದೇ ಮೈತ್ರಿ ಅಥವಾ ಒಪ್ಪಂದ ಸಾಧ್ಯವೇ ಇಲ್ಲ. ಅಥಣಿಯಲ್ಲಿ ಲಕ್ಷ್ಮಣ ಸವದಿಯನ್ನು ಸೋಲಿಸುತ್ತೇನೆಂದು ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಡೆದದ್ದು ಸತೀಶ್ ಅವರ ವೈಯಕ್ತಿಕ ನಿಲುವು. ಯಾವುದೇ ಸಂದರ್ಭದಲ್ಲೂ ನಾನು ಯಾವುದೇ ರಾಜಕೀಯ ಹೊಂದಾಣಿಕೆಗೆ ಒಪ್ಪುವುದಿಲ್ಲ ಎಂದರು.
Advertisement