

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ಮತ್ತು ಕಾಂಗ್ರೆಸ್ ಆಂತರಿಕ ಗೊಂದಲಗಳ ನಡುವಲ್ಲೇ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರು ತಂದೆಯ ಸಿಎಂ ಕುರ್ಚಿ ಉಳಿಸಲು ಕಸರತ್ತು ಆರಂಭಿಸಿದ್ದು, ದಲಿತ ಸಿಎಂ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಮಂಡ್ಯದ ಕನಕ ಭವನದಲ್ಲಿ ನಡೆದ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಲ್ಲಿ ಉಳಿಸಿಕೊಳ್ಳಿ ಎಂದು ಪರೋಕ್ಷವಾಗಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಕರೆ ನೀಡಿದರು.
ಹಿಂದುಳಿದ ವರ್ಗದವರು ಸಾವಿರಾರು ವರ್ಷದಿಂದ ಅವಕಾಶದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ 25 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ ಹಿಂದುಳಿದ ವರ್ಗದ 5 ಜನ ಮಾತ್ರ ಸಿಎಂ ಆಗಿದ್ದಾರೆ. ಅದರಲ್ಲಿ ದಲಿತರು ಸಿಎಂ ಆಗಿಲ್ಲ.
ಸಿದ್ದರಾಮಯ್ಯ ಮತ್ತು ಅರಸು ಅವರು ಮಾತ್ರ 5 ವರ್ಷ ಪೂರೈಸಿದ್ದಾರೆ. ಹಿಂದುಳಿದ ವರ್ಗದವರು ಸಣ್ಣತಪ್ಪು ಮಾಡಿದರೆ ಅದನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಇಲ್ಲದ ಹಗರಣವನ್ನು ಸೃಷ್ಟಿಸಿ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಶಕ್ತಿ ಇಲ್ಲದಿದ್ದರೆ ಸಮುದಾಯದ ಮೇಲೆ ಬರಲು ಸಾಧ್ಯವಿಲ್ಲ. ಇದಕ್ಕಾಗಿ ನಾವೆಲ್ಲ ಒಗ್ಗಟ್ಟಾಗಬೇಕು. ಸಮುದಾಯವನ್ನು ಉದ್ಧಾರ ಮಾಡುವವರ ಹಿಂದೆ ನಿಂತು ಅವರಿಗೆ ಬೆಂಬಲ ಕೊಡಬೇಕು. ಸಿದ್ದರಾಮಯ್ಯ ಪರ ನಿಂತ ಹಿಂದುಳಿದ ವರ್ಗದವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಹಿಂದುಳಿದ ವರ್ಗದ ಧ್ವನಿಯಾಗಿ ರಾಜಕೀಯ ಪದವಿ ಬೇಕು. ರಾಜಕೀಯ ಪದವಿ ಇದ್ದರೆ ರಾಜಕೀಯವಾಗಿ ಸಮುದಾಯಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ಜಾಗೃತರಾಗಿ ಸಮುದಾಯದ ಪರ ಇರುವ ನಾಯಕರನ್ನು ಉಳಿಸಿಕೊಳ್ಳಿ ಎಂದು ಕರೆ ನೀಡಿದರು.
ಸಮಾಜ ನಿಯಂತ್ರಿಸುವ ಉನ್ನತ ಸ್ಥಾನದಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕು. ಕಾರ್ಯಾಂಗ, ನ್ಯಾಯಾಂಗದಲ್ಲಿ ಪ್ರಬಲ ಸಮುದಾಯವರೇ ಇದ್ದಾರೆ. ಮಾಧ್ಯಮದಲ್ಲೂ ಮೇಲ್ವರ್ಗದವರೇ ಇದ್ದಾರೆ. ಉದ್ಯಮಿ, ಕೋಟ್ಯಧಿಪತಿ ಪಟ್ಟಿಯಲ್ಲಿ ಹಿಂದುಳಿದ ವರ್ಗದವರು ಇಲ್ಲ. ನಾವು ಅವರ ಸ್ಥಾನದಲ್ಲಿ ಕುಳಿತಾಗ ನಿಜವಾದ ಸಮಾನತೆ ಸಿಕ್ಕಂತಾಗುತ್ತದೆ. ಇದಕ್ಕಾಗಿ ನಾವು ಜಾಗೃತರಾಗಬೇಕು. ಇದಕ್ಕೆ ನಾವು ಶಿಕ್ಷಣ ಪಡೆದು ಶಿಕ್ಷಿತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು. ಸಿಎಂ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಕೇವಲ ಊಹಾಪೋಹ. ಪಕ್ಷದಲ್ಲಿ ಯಾವುದೇ ಯುದ್ದ, ಯಾವುದೇ ಘರ್ಷಣೆ ಇಲ್ಲ. ಮೀಡಿಯಾದಲ್ಲಿ ಮಾತ್ರ ಚರ್ಚೆ ಆಗುತ್ತಿದೆ ಅಷ್ಟೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನ ತೀರ್ಮಾನ ಮಾಡಬೇಕಾದುದು ನಮ್ಮ ಹೈಕಮಾಂಡ್. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್‌ಗೆ ಬದ್ಧರಾಗಿದ್ದಾರೆ ಎಂದರು.
ಹೈಕಮಾಂಡ್ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಇಬ್ಬರ ಜೊತೆ ಕುಳಿತು ಮಾತನಾಡಲಿದ್ದು, ಆದಷ್ಟು ಬೇಗ ಗೊಂದಲ ನಿವಾರಣೆ ಆಗಿ, ಹೈಕಮಾಂಡ್ ಈ ವಿಚಾರಕ್ಕೆ ತೆರೆ ಎಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಡೂವರೇ ವರ್ಷ ಬದಲಾವಣೆ ಬಗ್ಗೆ ಯಾರಿಗೂ ಗೊತ್ತಿಲ್ಲ, ಅದರ ಬಗ್ಗೆ ಚರ್ಚೆಯ ಅವಶ್ಯಕತೆ ಇಲ್ಲ, ಕೆಲವರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಮಾಡಲು ಹೇಳಿದ್ದಾರೆ. ಪಕ್ಷ ಅಂದ ಮೇಲೆ ಎಷ್ಟೋ ಜನ ಮುಖ್ಯಮಂತ್ರಿ ಪದವಿಗೆ ಆಕಾಂಕ್ಷಿತರಿರುತ್ತಾರೆ. ಅವರ ಕಡೆಯವರು ಕೇಳಿದ್ದಾರೆ ಅಷ್ಟೇ, ಅದು ದೊಡ್ಡ ವಿಷಯ ಅಲ್ಲ ಎಂದು ತಿಳಿಸಿದರು.
Advertisement