
ತುಮಕೂರು: 2013-18ರ ಸಿದ್ದರಾಮಯ್ಯನವರೇ ಬೇರೆ, ಈಗಿನ ಸಿದ್ದರಾಮಯ್ಯನೇ ಬೇರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಶನಿವಾರ ಹೇಳಿದ್ದಾರೆ.
ತುಮಕೂರಿನಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ರಾಜಣ್ಣ ಅವರು ಮಾತನಾಡಿದರು.
ಸಿದ್ದರಾಮಯ್ಯನವರಿಗೆ ಇದ್ದ ಹಳೆಯ ಗತ್ತು ಈಗಿಲ್ಲ. 2013-18ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಬೇರೆ, ಈಗಿನ ಸಿದ್ದರಾಮಯ್ಯನೇ ಬೇರೆ. ಆಗ ಅವರು ಪಾದರಸದಂತೆ ಚುರುಕಾಗಿ ಕೆಲಸ ಮಾಡುತ್ತಿದ್ದರು. ಆದರೆ, ಈಗ ಏನಾಗಿದೆಯೋ ಏನ್ ಕಥೆನೋ ಗೊತ್ತಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಅವರಿಗೆ ಬೇರೆ, ಬೇರೆ ರೀತಿಯ ಒತ್ತಡ ಇದೆ ಎಂದು ಹೊಸ ಬಾಂಬ್ ಸಿಡಿಸಿದರು.
ಕೆಲವು ಸಲ ನಾಯಕನಾದವನಿಗೆ ಹೇಳದೆ ಇರುವಂತಹ ಒತ್ತಡ ಇರುತ್ತದೆ. ಈಗಲೂ ಅವರಿಗೆ ಅಂತಹ ಒತ್ತಡ ಇರಬಹುದು. ಆದರೆ, ಏನೇ ಆದರೂ ಕೂಡಾ, ಎಂತಹ ಸಂದರ್ಭ ಬಂದರು ಕೂಡಾ, ಸಿದ್ದರಾಮಯ್ಯನವರು ಮಾಡಿದ ಪುಣ್ಯದ ಕಾರ್ಯಕ್ರಮ ಅಂದರೆ, ಅದು ಅನ್ನಭಾಗ್ಯ ಕಾರ್ಯಕ್ರಮ. ಈಗಿನ ಯುವಜನತೆಗೆ ಹಸಿವಿನ ಮಹತ್ವ ಗೊತ್ತಿರಲಿಕ್ಕಿಲ್ಲ. ಆದರೆ, ಅನ್ನಭಾಗ್ಯ ಕಾರ್ಯಕ್ರಮದ ಮಹತ್ವ ಹಳಬರಿಗೆ ಗೊತ್ತಾಗುತ್ತೆ ಎಂದು ಹೇಳಿದರು. ಇದೇ ವೇಳೆ ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದೂ ತಿಳಿಸಿದರು.
ಜಾತಿ ಸಮೀಕ್ಷೆ ಕುರಿತು ಮಾತನಾಡಿ, ಜಾತಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಗಣತಿ ಹಾಗೂ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಈಗ ನಡೆಯುತ್ತಿರುವುದರಲ್ಲಿ ಜಾತಿ ಬೇಕಾದರೆ ಬರೆಸಬಹುದು, ಬಿಡಬಹುದು ಯಾರಿಗೆ ಅವಶ್ಯಕತೆ ಇದೆ ಅಂತಹವರಿಗೆ ಸೌಲಭ್ಯ ದೊರಕಿಸಿಕೊಡಲು ಇರುವಂತಹ ಸರ್ವೆ ಇದು. ಮಾತು ಎತ್ತಿದರೆ ಜಾತಿ ಸರ್ವೆ ಅಂತಾರೆ. ಇದು ಜನರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವಂತಹದ್ದು ಜನರಲ್ಲಿ ಅಸಮಧಾನ ಸೃಷ್ಟಿಸುವ ಕೆಲಸ ಆಗುತ್ತಿದೆ. ಇದು ಆಗಬಾರದು ಎಂದರು.
Advertisement