
ಬೆಂಗಳೂರು: ರಾಜಕೀಯ ಒತ್ತಡಕ್ಕೆ ಮಣಿದು ಪೂರ್ವ ಸಿದ್ಧತೆಗಳಿಲ್ಲದೆ ಹಿಂದುಳಿದ ವರ್ಗಗಳ ಆಯೋಗವು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಗೊಂದಲದಿಂದ ಕೂಡಿದ್ದು, ಅಪ್ರಸ್ತುತ ಪ್ರಶ್ನೆಗಳನ್ನು ಪ್ರಶ್ನಾವಳಿಯಲ್ಲಿ ಸೇರಿಸಲಾಗಿದೆ ಎಂದು ಕಿಡಿಕಾರಿದರು.
ಸರಕಾರ ದಿನಕ್ಕೊಂದು ಬದಲಾವಣೆ ಹೇಳುತ್ತಿದೆ. ಆಯೋಗವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ, ಯಾರದೋ ಒತ್ತಡಕ್ಕೆ ಮಣಿದು ಗಣತಿ ಮಾಡುತ್ತಿದೆ. 60 ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಪ್ರಶ್ನೆಗಳಿಗೆ ಸ್ವತಃ ಡಿಸಿಎಂ ಕೂಡ ಉತ್ತರಿಸಲು ಸಾಧ್ಯವಾಗಿಲ್ಲ, ಇನ್ನು ಒಬ್ಬ ಸಾಮಾನ್ಯ ವ್ಯಕ್ತಿ ಆ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾನೆ? ಇದು ಅವೈಜ್ಞಾನಿಕವಾಗಿದೆ. ಪ್ರಶ್ನಾವಳಿಯಲ್ಲಿ ಹಲವು ಅಪ್ರಸ್ತುತ ಪ್ರಶ್ನೆಗಳಿವೆ. ಇದರಿಂದ ಶಿಕ್ಷಕರು ಕೂಡ ಅನಾನುಕೂಲಗಳನ್ನು ಎದುರಿಸುತ್ತಿದ್ದಾರೆ.
ಅವರಿಗೂ ಕುಟುಂಬ, ಎಲ್ಲವೂ ಇರುತ್ತದೆ. ವಿಕಲಚೇತನರನ್ನೂ ಬಳಸಿಕೊಂಡಿದ್ದು ಸಾಕಷ್ಟು ಟೀಕೆಗಳು ಬಂದಿವೆ. ಹಾಸನದ ಬೇಲೂರಿನಲ್ಲಿ ನಾಯಿ ಕಚ್ಚಿದ ಘಟನೆಯೂ ಆಗಿದೆ. ಇಂತಹ ಹಲವಾರು ಘಟನೆಗಳಿಂದ ಹಲವರಿಗೆ ಗಾಯವಾಗಿದೆ. ಒಟ್ಟಾರೆಯಾಗಿ ಒತ್ತಡಕ್ಕೆ ಮಣಿದು ಆತುರಾತುರವಾಗಿ ಈ ರೀತಿ ಸಮೀಕ್ಷೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ನಾವೇನಾದರೂ ಹೆಚ್ಚು ಮಾತನಾಡಿದರೆ, ಬಿಜೆಪಿಯವರು ಹಿಂದುಳಿದವರ ವಿರೋಧಿಗಳು, ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಗಬಾರದೆಂದು ಮಾತನಾಡುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ. ಈ ರಾಜ್ಯ, ದೇಶದ ಎಸ್‍ಸಿ-ಎಸ್‍ಟಿ ಸೇರಿದಂತೆ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿಗೆ ಹೆಚ್ಚಾಗಿ ಇರುವಂತಹದ್ದು ಎಂದು ಹೇಳಿದರು.
ಆ ಬದ್ಧತೆಯ ಕಾರಣದಿಂದ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ಬಂದ ನಂತರ ಯಾವುದೇ ಕೇಂದ್ರ ಸರಕಾರಗಳು ಮಾಡದ ತೀರ್ಮಾನ ಮಾಡಿದ್ದಾರೆ. ಅವರ ತೀರ್ಮಾನದಂತೆ ದೇಶಾದ್ಯಂತ ಜನಗಣತಿಯ ಜಾತಿ ಜನಗಣತಿ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಸಮೀಕ್ಷೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
Advertisement