
ಬೆಂಗಳೂರು: ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು ಉತ್ಸವದ ಜ್ಯೋತಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಗಳು ತಮ್ಮ ಸಂಪುಟ ಸದಸ್ಯರಿಗಾಗಿ ಇಂದು ಆಯೋಜಿಸಿರುವ ಭೋಜನಕೂಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ನಾವು ಯಾವಾಗಲೂ ಭೇಟಿಯಾಗುತ್ತಲೇ ಇರುತ್ತೇವೆ. ನಮ್ಮ 'ಡಿನ್ನರ್ ಮೀಟಿಂಗ್'ಗೆ ವಿಶೇಷ ಅರ್ಥ ಕಲ್ಪಿಸುವುದನ್ನು ತಳ್ಳಿಹಾಕಿದರು.
ಆದರೆ, ರಾಜ್ಯ ಸರ್ಕಾರವು ಎರಡೂವರೆ ವರ್ಷಗಳ ಆಡಳಿತವನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಮತ್ತು ನಾಯಕತ್ವ ಬದಲಾವಣೆಯ ಗುಸುಗುಸು ದಟ್ಟವಾಗಿರುವ ಸಂದರ್ಭದಲ್ಲಿ ಈ ಔತಣಕೂಟವನ್ನು ಕರೆದಿದ್ದಾರೆ.
ನವೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಐದು ವರ್ಷಗಳ ಅವಧಿಯ ಅರ್ಧ ದಾರಿ ತಲುಪುತ್ತದೆ. ಈ ವೇಳೆ ರಾಜ್ಯದಲ್ಲಿ ಆಡಳಿತ ಬದಲಾವಣೆಯ ಬಗ್ಗೆ ಊಹಾಪೋಹಗಳು ಎದ್ದಿವೆ, ಈ ನಡುವೆಯೇ ಡಿನ್ನರ್ ಮೀಟ್ ಕೂಡ ಆಜೋಯಿಸಲಾಗಿದೆ ಹೀಗಾಗಿ ಇದನ್ನು ಕೆಲವರು "ನವೆಂಬರ್ ಕ್ರಾಂತಿ" ಎಂದು ಕರೆಯುತ್ತಾರೆ.
ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಪಾಳಯವು ಸಂಪುಟ ಪುನರ್ರಚನೆಗೆ ಒತ್ತಾಯಿಸುತ್ತಿದೆ. ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಂಪುಟ ಪುನರ್ರಚನೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯಯ್ಯ 5 ವರ್ಷಗಳ ಅಧಿಕಾರಾವಧಿಯನ್ನು ಮುಂದುವರಿಸುತ್ತಾರೆ ಎಂಬ ಸಂದೇಶ ನೀಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಕುರ್ಚಿಗೆ ಹಕ್ಕು ಸಾಧಿಸಲು ಕಾಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಕ್ರಮ ಹಿನ್ನಡೆಯಾಗಿ ಪರಿಣಮಿಸಬಹುದು. ರಾಜ್ಯದಲ್ಲಿ ಸಂಪುಟ ಪುನರ್ರಚನೆ ಬಗ್ಗೆ ಹರಡಿರುವ ಊಹಾಪೋಹಗಳನ್ನು ಶಿವಕುಮಾರ್ ಶನಿವಾರ ತಳ್ಳಿಹಾಕಿದ್ದು, ಇದೊಂದು "ವದಂತಿ" ಎಂದು ಕರೆದಿದ್ದಾರೆ.
ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆಗಳನ್ನು ಭೋಜನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭ್ರಷ್ಟಾಚಾರ ಆರೋಪಗಳ ವಿರುದ್ಧ ಹೋರಾಡುವ ಬಗ್ಗೆ, ವಿಶೇಷವಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್‌ಸಿಎ) ಇತ್ತೀಚೆಗೆ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಮಿಷನ್ ಅಥವಾ ಲಂಚದ ಪ್ರಮಾಣ 'ದ್ವಿಗುಣಗೊಂಡಿದೆ' ಎಂದು ಹೇಳಿರುವ ಪತ್ರದ ನಂತರ, ಮುಖ್ಯಮಂತ್ರಿಗಳು ಚರ್ಚಿಸಲು ಬಯಸಬಹುದು.
Advertisement