
ಬೆಂಗಳೂರು: ಸರ್ಕಾರಿ ಶಾಲೆಗಳು, ಕಾಲೇಜುಗಳು, ದೇವಾಲಯಗಳು ಮತ್ತು ಇತರ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾಪ ಮುಂದಿಟ್ಟಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.
ಕಾಂಗ್ರೆಸ್ ಎಂಬ ಅಧಿಕಾರ ಸೃಷ್ಟಿಯ ಫ್ಯಾಕ್ಟರಿ ಹೊರತುಪಡಿಸಿದಂತೆ ನಿಮ್ಮ ಜೀವನದಲ್ಲಿ ಯಾವ ರಾಷ್ಟ್ರ ಭಕ್ತ ಸಂಘಟನೆಯಲ್ಲಿ ನೀವು ಸೇವೆ ಸಲ್ಲಿಸಿದ್ದೀರಿ ಎಂದು ಆಧಾರ ಸಹಿತ ಮಾಹಿತಿ ಕೊಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಎಂಬ ಅಧಿಕಾರ ಸೃಷ್ಟಿಯ ಫ್ಯಾಕ್ಟರಿ ಹೊರತುಪಡಿಸಿದಂತೆ ನಿಮ್ಮ ಜೀವನದಲ್ಲಿ ಯಾವ ರಾಷ್ಟ್ರ ಭಕ್ತ ಸಂಘಟನೆಯಲ್ಲಿ ನೀವು ಸೇವೆ ಸಲ್ಲಿಸಿದ್ದೀರಿ ಎಂದು ಆಧಾರ ಸಹಿತ ಮಾಹಿತಿ ಕೊಡಿ. ಹಿಂದೂ ಸಂಘಟನೆಗಳನ್ನು ಹೊರತುಪಡಿಸಿ ನಿಮ್ಮ ರಾಜಕೀಯ ಜೀವನದಲ್ಲಿ ಇತರೆ ಕೋಮುವಾದಿ ಸಂಘಟನೆಗಳ ಬಗ್ಗೆ, ಭಯೋತ್ಪಾದಕತೆಯ ಕುರಿತು, ಮುಸ್ಲಿಂ ಮೂಲಭೂತವಾದಿ ಸಂಸ್ಥೆಗಳ ಕುಕೃತ್ಯಗಳ ಕುರಿತು ಎಂದಾದರೂ ಒಮ್ಮೆಯಾದರೂ ನೀವು ಟೀಕೆ- ಟಿಪ್ಪಣಿ ಮಾಡಿದ್ದೀರಾ?
ದೇಶದ ಮೇಲೆ ಹಲವು ಬಾರಿ ದಾಳಿ ಮಾಡಿದ್ದ ವಿದ್ವಂಸಕ ಕೃತ್ಯಗಳಲ್ಲಿ ತೊಡಗುವ ಮುಸ್ಲಿಂ ಭಯೋತ್ಪಾದಕರು ಹಾಗೂ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಚಟುವಟಿಕೆಗಳ ಕುರಿತು ಎಂದಾದರೂ ಟೀಕಿಸಿದ್ದೀರಾ? ಖಂಡಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಸಂಘಟನೆಗಳ ಹಿನ್ನೆಲೆ ಇಲ್ಲದೇ ಅಧಿಕಾರ ರಾಜಕಾರಣದ ನೆರಳಿನಲ್ಲಿ ಬಂದ ನಿಮಗೆ ರಾಷ್ಟ್ರಭಕ್ತ ಸಂಘಟನೆಗಳ ಸೇವೆ, ಇತಿಹಾಸ ತಿಳಿಯಲು ಹೇಗೆ ಸಾಧ್ಯ? ನಿಮ್ಮ ಉದ್ದೇಶ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವುದಲ್ಲ, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು. ಏಕೆಂದರೆ ನೀವು ಹಿಂದೂ ಧರ್ಮವನ್ನು ಮರೆತು ಬಹು ವರ್ಷಗಳೇ ಕಳೆದಿದೆ, ಈ ಕಾರಣಕ್ಕಾಗಿಯೇ ಹಿಂದೂ ಧರ್ಮದ ಕುರಿತು ನೀವು ಹಗೆತನ, ದ್ವೇಷ ಸಾಧಿಸುತ್ತಿದ್ದೀರಿ.
ಒಂದೊಮ್ಮೆ ನಿಮ್ಮ ಕುಟುಂಬದ ಇತಿಹಾಸದತ್ತ ಮೆಲುಕುಹಾಕಿ, ರಜಾಕರ ದಾಳಿಯ ನಡುವೆ ನಿಮ್ಮ ಪೂಜ್ಯ ತಂದೆಯವರು ಹೇಗೆ ಬದುಕುಳಿದರು? ಎಂಬುದನ್ನು ಒಮ್ಮೆ ಅವಲೋಕನ ಮಾಡಿ, ಆದಾಗ್ಯೂ ನೀವು ರಜಾಕರು ಹಾಗೂ ರಜಾಕ ಸಂಸ್ಕೃತಿಯನ್ನು ಒಮ್ಮೆಯೂ ಟೀಕಿಸಲಿಲ್ಲ, ಬದಲಾಗಿ ಅದನ್ನು ಪೋಷಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರಾಗಿ ದೇಶವಿರೋಧಿ ಮನಸ್ಥಿತಿಯ ಸಂಘಟನೆಗಳ ಪ್ರತಿನಿಧಿ ಎಂಬಂತೆ ರಾಷ್ಟ್ರಭಕ್ತ ಸಂಘಟನೆ ಆರ್‌ಎಸ್‌ಎಸ್ ಅನ್ನು ಟೀಕಿಸಿ, ಅವಹೇಳನ ಮಾಡುವುದನ್ನು ರಾಜಕೀಯ ಅಧಿಕಾರ ಅನುಭವಿಸುವ ಏಕೈಕ ಉದ್ದೇಶಕ್ಕಾಗಿ ಜೀವನ ಧ್ಯೇಯ ಮಾಡಿಕೊಂಡಿದ್ದೀರಿ.
ಕಾಂಗ್ರೆಸ್ ಎಂದರೆ ಹಿಂದೂ ಧರ್ಮವನ್ನು ವಿರೋಧಿಸುವುದು, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು, ಆ ಮೂಲಕ ರಾಷ್ಟ್ರ ವಿದ್ವಾಂಸಕ ಶಕ್ತಿಗಳನ್ನು ಉತ್ತೇಜಿಸುವುದು ಮುಖ್ಯ ಅಜೆಂಡಾ ಆಗಿದೆ. ಅದನ್ನು ಪ್ರತಿನಿಧಿಸಿ ಆರ್ ಎಸ್ ಎಸ್ ಹಾಗೂ ರಾಷ್ಟ್ರಭಕ್ತ ಸಂಘಟನೆಗಳ ವಿರುದ್ಧ ಡಂಗೂರ ಭಾರಿಸಿ ಬೊಬ್ಬೆ ಹೊಡೆಯುವ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿ, ನಿಮ್ಮ ಹೈಕಮಾಂಡ್ ಬೆನ್ನು ತಟ್ಟಿಸಿಕೊಳ್ಳುವ ಪೈಪೋಟಿಯಲ್ಲಿ ನಿರತರಾಗಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಕಾರ್ಯಕ್ರಮ ಸ್ಥಳಕ್ಕೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ವೇಳೆ ಅವರು ರಾಜ್ಯದ ಗೃಹ ಸಚಿವರಾಗಿದ್ದರು. ಅಂದು ಅವರು ತಮ್ಮ ಅಧ್ಯಕ್ಷತೆಯಲ್ಲಿ ಎಲ್ಲ ಸಮುದಾಯಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಶಾಂತಿ ಸಮಿತಿ ನಡೆಸಿದ ಬಳಿಕ ಆರೆಸ್ಸೆಸ್ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿದ್ದರು. ಅದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಿಮ್ಮ ಜನರಿಗೆ ಎಚ್ಚರಿಕೆ ನೀಡಲು ನೀಡಿದ ಭೇಟಿಯಾಗಿತ್ತು. ಭೇಟಿ ವೇಳೆ ಒಂದೋ ದೇಶದ ಕಾನೂನಿಗೆ ಬದ್ಧರಾಗಿರಿ ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ" ಎಂದು ಮಲ್ಲಿಕಾರ್ಜುನ ಖರ್ಗೆ ನಿಮ್ಮನ್ನು ಎಚ್ಚರಿಸಿದ್ದರು ಎಂದು ಹೇಳಿದ್ದಾರೆ.
Advertisement