
ಬೆಂಗಳೂರು: ಇಲ್ಲಿ ಕಾಂಗ್ರೆಸ್ ನಾಯಕರು RSS ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಭಾರತದಲ್ಲಿ ಮೊದಲ AI-ಹಬ್‌ಗಾಗಿ Google ಬರೊಬ್ಬರಿ 15 ಶತಕೋಟಿ ಡಾಲರ್ ಹೂಡಿಕೆ ಮಾಡಲಿದ್ದು, ಈ ಬೃಹತ್ ಯೋಜನೆ ಆಂಧ್ರಪ್ರದೇಶದ ಪಾಲಾಗಿದೆ ಇದರಿಂದ ರಾಜ್ಯಕ್ಕೆ 10,000 ಕೋಟಿ ರೂ ಆದಾಯ ಹಾಗೂ 30,000 ಉದ್ಯೋಗ ಕೈತಪ್ಪಿದಂತಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಇಲ್ಲಿ ಕಾಂಗ್ರೆಸ್ ನಾಯಕರು RSS ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ, ಅಸಮರ್ಥ ಆಡಳಿತ, ಉದ್ಯಮ-ವಿರೋಧಿ ನೀತಿಗಳು ಇದಕ್ಕೆ ಕಾರಣವಾಗಿದ್ದು, ಉದ್ಯೋಗ ಸೃಷ್ಟಿ ಇಲ್ಲದೆ ಕರ್ನಾಟಕದ ಯುವಕರಿಗೆ ನಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನಾದರೂ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಅನವಶ್ಯಕ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು. ಉದ್ಯಮ-ಸ್ನೇಹಿ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ವರ್ಚಸ್ಸಿಗೆ ಕಳಂಕ ತರದೇ ಉದ್ಯಮ, ಹೂಡಿಕೆಯನ್ನು ಆಕರ್ಷಿಸುವ ಮೂಲಕ ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
Advertisement