
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಆಯೋಜಿಸಿದ್ದ ಔತಣಕೂಟದ ಪ್ರಮುಖ ಉದ್ದೇಶ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಿಸುವುದಾಗಿತ್ತು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕವನ್ನು ಚುನಾವಣೆಗೆ ಎಟಿಎಂ ಮಾಡಿಕೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದು, ಆಡಳಿತದಲ್ಲಿ ಆಸಕ್ತಿಯನ್ನೂ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
"ಬಿಹಾರ ಚುನಾವಣೆಗೆ ಹಣವನ್ನು ಸಂಗ್ರಹಿಸಲು ಕಾಂಗ್ರೆಸ್ ಅವರನ್ನು ಕೇಳಿದೆ, ಆದ್ದರಿಂದ ಅವರು ಮಂತ್ರಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು. ಅದರಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಹಣ ನೀಡುವಂತೆ ಕೇಳಿಕೊಂಡಿದ್ದಾರೆ ಎಂದರು.
'ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಆಂತರಿಕ ಕಚ್ಚಾಟ ಹೆಚ್ಚಿದ್ದು, ಸಿಎಂ ಸ್ಥಾನದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದು, ನವೆಂಬರ್‌ನಲ್ಲಿ ಶಿವಕುಮಾರ್ ಅವರನ್ನು ಸಿಎಂ ಮಾಡಲಾಗುವುದು ಎಂದು ಬೆಂಬಲಿಗ ಶಾಸಕರು ಹೇಳಿದ್ದಾರೆ.
ಈ ಹಿಂದೆ ಕೆ ಎನ್ ರಾಜಣ್ಣ ಅವರು ನವೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ ಅವರು ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು" ಎಂದು ಅವರು ಹೇಳಿದರು.
Advertisement