
ಬೆಂಗಳೂರು: ಚಿತ್ತಾಪುರದಲ್ಲಿ ಗೋ ಹತ್ಯೆ ಮಾಡಿದವರ ವಿರುದ್ಧ ಪ್ರಕರಣ ಹಿಂಪಡೆದು ಮುಸ್ಲಿಂ ಓಲೈಕೆ ಮಾಡಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಚಿತ್ತಾಪುರ ತಾಲೂಕಿನಲ್ಲಿ ಗೋ ಕಳ್ಳ ಸಾಗಣೆ ಹಾಗೂ ಗೋ ಹತ್ಯೆ ಮಾಡಿದ ಸುಮಾರು 30 ಮಂದಿ ವಿರುದ್ಧ ದಾಖಲಾಗಿದ್ದ ಪ್ರಕರಣ ಹಿಂಪಡೆಯಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದ ಮೇರೆಗೆ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಗಲಭೆ ವಿಚಾರದಲ್ಲೂ ಹೀಗೆಯೇ ಆಗಿ ಕೋರ್ಟ್ ಛೀಮಾರಿ ಹಾಕಿತ್ತು. ಈ ಪ್ರಕರಣದಲ್ಲೂ ಇದೇ ರೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಮಾತೆತ್ತಿದರೆ ಗಾಂಧೀಜಿ ಬಗ್ಗೆ ಮಾತನಾಡುತ್ತಾರೆ. ಗೋ ಹತ್ಯೆ ಮಾಡುವುದಾದರೆ ಗಾಂಧೀಜಿಗೆ ಇವರು ಯಾವ ಬೆಲೆ ನೀಡಿದ್ದಾರೆ? ಇದು ಮುಸ್ಲಿಂ ಓಲೈಕೆ ಸಂಸ್ಕೃತಿ. ಹೀಗೆ ಬಿಡುಗಡೆ ಮಾಡಿದರೆ ಅವರು ಮತ್ತೆ ಇದೇ ದಂಧೆಗೆ ಇಳಿಯುತ್ತಾರೆ. ಇದರ ವಿರುದ್ಧ ನಾವು ಕೋರ್ಟ್‌ಗೆ ಹೋಗಲಿದ್ದೇವೆ. ಈ ವಿಚಾರದಲ್ಲೂ ನಮಗೇ ಜಯ ಸಿಗಲಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಲದಲ್ಲಿ ಆಗಿದ್ದ ಆದೇಶವನ್ನು ಸರಿಯಾಗಿ ಓದಬೇಕು. ಅದರಲ್ಲಿ ಮುಖ್ಯಮಂತ್ರಿಯ ಸಹಿಯೂ ಇಲ್ಲ. ಅದು ಚಾಮರಾಜಪೇಟೆಯ ಒಂದೇ ಒಂದು ಶಾಲೆಗೆ ಸಂಬಂಧಿಸಿ ಹೊರಡಿಸಿದ ಸಣ್ಣ ಆದೇಶ. ಇದರಲ್ಲಿ ಮುಖ್ಯಮಂತ್ರಿ ಪಾತ್ರ ಇರಲಿಲ್ಲ. 14 ಸೈಟು ಲೂಟಿಯಾದಾಗ, ವಾಲ್ಮೀಕಿ ನಿಗಮದ ಹಗರಣ ನಡೆದಾಗ ಎಲ್ಲದಕ್ಕೂ ಅಧಿಕಾರಿಗಳೇ ಸಹಿ ಹಾಕಿದ್ದಾರೆ. ಹಾಗಾದರೆ ಇವೆಲ್ಲ ಹಗರಣ ಮುಖ್ಯಮಂತ್ರಿಯಿಂದಲೇ ನಡೆದಿದೆಯೇ ಎಂದು ಪ್ರಶ್ನಿಸಿದರು.
ಸರ್ಕಾರಿ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿದ ಮನವಿಯು ಸಂಘದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಇದೇ ವೇಳೆ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರನ್ನು ಟೀಕಿಸಿದ ಅವರು, ಕೇಂದ್ರದ ಎನ್‌ಡಿಎ ಸರ್ಕಾರವು ಹಿಂದಿನ ಯುಪಿಎ ಸರ್ಕಾರಕ್ಕಿಂತ ಐದು ಪಟ್ಟು ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಬಸ್ ನಿಲ್ದಾಣ, ಆಸ್ಪತ್ರೆ ಅಥವಾ ರಸ್ತೆಯನ್ನು ನಿರ್ಮಿಸುವ ಸ್ಥಿತಿಯಲ್ಲಿಲ್ಲ ಎಂದು ಆರೋಪಿಸಿದರು.
Advertisement