

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಅಥವಾ 'ನವೆಂಬರ್ ಕ್ರಾಂತಿ' ಮತ್ತು ದಲಿತ ಸಿಎಂ ವಿಚಾರವಾಗಿ ಸಚಿವರ ಚರ್ಚೆ ಬಗ್ಗೆ ಅನಗತ್ಯ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಪಕ್ಷದ ನಾಯಕರು ಮುಖ್ಯಮಂತ್ರಿ ಬದಲಾವಣೆ ಅಥವಾ ದಲಿತ ಸಿಎಂ ಕುರಿತು ಚರ್ಚಿಸುತ್ತಿರುವ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಸಿಎಂ, "ಅಂತಹ ಯಾವುದೇ ವಿಷಯಗಳ ಬಗ್ಗೆ ಅನಗತ್ಯ ಮಾತನಾಡಿ ಯಾರೂ ದಣಿಯುವುದು ಬೇಡ ಎಂದು ಮನವಿ ಮಾಡುತ್ತೇನೆ ಎಂದರು.
ಏತನ್ಮಧ್ಯೆ, ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥರೂ ಆಗಿರುವ ಶಿವಕುಮಾರ್, ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಲ್ಲಿ ಮುಂಬರುವ ಎಂಎಲ್‌ಸಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು.
"ಪ್ರತಿ ಕ್ಷೇತ್ರಕ್ಕೂ ನಾಲ್ಕರಿಂದ ಐದು ಜನ ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ನಾನು 8-10 ದಿನಗಳಲ್ಲಿ ಹೆಸರುಗಳನ್ನು ಅಂತಿಮಗೊಳಿಸುತ್ತೇನೆ. ಮುಂದಿನ ಸುತ್ತಿನಲ್ಲಿ, ನಾನು ಜಿಲ್ಲಾ ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯವನ್ನು ಪಡೆಯುತ್ತೇನೆ" ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವೆಂಬರ್ 20 ರಂದು ರಾಜ್ಯಕ್ಕೆ ಭೇಟಿ ನೀಡಿ, ಸುಮಾರು 100 'ಕಾಂಗ್ರೆಸ್ ಭವನ'ಗಳಿಗೆ ಶಂಕುಸ್ಥಾಪನೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, 'ಇನ್ನೂ ದಿನಾಂಕ ಅಂತಿಮವಾಗಿಲ್ಲ ಎಂದರು.
"ನಾನು ವಿನಂತಿಸಿದ್ದೇನೆ. ಕಟ್ಟಡಕ್ಕಾಗಿ ಕೆಲವು ಸ್ಥಳಗಳಲ್ಲಿ ಕಾಗದ ಪತ್ರ ಗಳು ಸಿದ್ಧವಾಗುತ್ತಿವೆ ಮತ್ತು ಸಿದ್ಧತೆಗಳು ನಡೆಯುತ್ತಿವೆ. ಎಲ್ಲರಿಗೂ ಟಾರ್ಗೆಟ್ ನೀಡಲಾಗಿದೆ" ಎಂದು ಶಿವಕುಮಾರ್ ಹೇಳಿದರು.
ಈ ಕಾಂಗ್ರೆಸ್ ಭವನ ನಿರ್ಮಾಣ ವಿಚಾರದಲ್ಲಿ ಸಚಿವರು, ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಯಾರ್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಲ್ಲ ಎಂದು ವರದಿ ನೀಡುವಂತೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಾನು ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಕಳುಹಿಸಬೇಕು. ಆನಂತರ ಆವರು ದಿನಾಂಕ ನಿಗದಿ ಮಾಡುತ್ತಾರೆ" ಎಂದು ವಿವರಿಸಿದರು.
Advertisement