

ಬೆಳಗಾವಿ: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯಾಗಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಭವಿಷ್ಯ ನುಡಿದಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಲಾಬಿ ನಡೆಸುತ್ತಿರುವವರು ಯಾರೂ ಸಿಎಂ ಆಗಲ್ಲ. ರಾಜ್ಯದ ಸಾರಥ್ಯ ಬ್ಲ್ಯಾಕ್ ಹಾರ್ಸ್ ಕೈಗೆ ಸಿಗಲಿದೆ ಎಂದರು.
ಡಿಕೆಶಿಯೂ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ ಕೂಡ ಸಿಎಂ ಆಗಲ್ಲ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಹೀಗಾಗಿ ಅವರೇ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದರು.
ಡಿಕೆಶಿಯನ್ನ ಸಿಎಂ ಮಾಡ್ತೀನಿ ಅಂತ ನೀವು ಡಿಸೈಡ್ ಮಾಡಿದ್ರೆ, ನಾನು ಸತೀಶ್ ಜಾರಕಿಹೊಳಿ ಪರವಾಗಿ ನಿಲ್ತೀನಿ ಅಂತ ಸಿದ್ದರಾಮಯ್ಯ ಸಂದೇಶ ಕೊಟ್ಟಿದ್ದಾರೆ. ತಮ್ಮ ಮಗನನ್ನು ಕಳಿಸಿ ಸಂದೇಶ ಸಾರಿದ್ದಾರೆ ಯತ್ನಾಳ್ ಆರೋಪಿಸಿದರು.
ಸಿಎಂ ಹುದ್ದೆಗೆ ಖರ್ಗೆ ಹೆಸರು ಪ್ರಸ್ತಾಪವಾದರೆ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಇತರ ಎಲ್ಲರೂ ಸ್ಪರ್ಧೆಯಿಂದ ಹೊರಗುಳಿಯುತ್ತಾರೆ ಎಂದರು.
Advertisement