

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ಅನಿವಾರ್ಯ ಅಲ್ಲವೇ? ಅದೇ ರೀತಿ ಸಿದ್ದರಾಮಯ್ಯ ಕೂಡ ಅಗತ್ಯ ಮತ್ತು ಅನಿವಾರ್ಯ. ನಾಯಕತ್ವ ಬದಲಾವಣೆಯ ಅನಿವಾರ್ಯತೆ ಈಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಸಿದ್ದರಾಮಯ್ಯ ನಾಯಕತ್ವ ಅನಿವಾರ್ಯ. ರಾಜಕಾರಣದಲ್ಲಿ ಅವರು ಸಕ್ರಿಯವಾಗಿರಬೇಕು. ರಾಜಕಾರಣದಿಂದ ನಿವೃತ್ತಿ ಆಗಬಾರದು. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರೂ ನಾವು ಒಪ್ಪುವುದಿಲ್ಲ ಎಂದರು.
ಮುಖ್ಯಮಂತ್ರಿಯ ಆಪ್ತ ವಲಯದಲ್ಲಿರುವ ಶಾಸಕ ಕೆ.ಎನ್. ರಾಜಣ್ಣ ಕೂಡಾ ಇತ್ತೀಚೆಗೆ, ‘ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ’ ಎಂದಿದ್ದರು. ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ನಿರ್ವಿವಾದವಾಗಿ ಇಡೀ ರಾಜ್ಯಕ್ಕೆ ಅವರ ನಾಯಕತ್ವ ಬೇಕು. ಅವರು ರಾಜ್ಯ ರಾಜಕಾರಣದಿಂದ ನಿವೃತ್ತಿಯಾಗದೆ, ಸಕ್ರಿಯರಾಗಿಯೇ ಇರಬೇಕು ಎಂದು ಅಭಿಪ್ರಾಯಪಟ್ಟರು.
ಮುಂದಿನ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರೂ ನಾವು ಒಪ್ಪಲ್ಲ. ಅವರು ಜನಪ್ರಿಯ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಮುಖ ಇದ್ದಂತೆ. ಖಂಡಿತವಾಗಿಯೂ ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ. ರಾಜಕಾರಣದಿಂದ ಅವರು ಹೊರಗೆ ಉಳಿಯಬಾರದು ಎಂದರು.
Advertisement