

ಬೆಂಗಳೂರು: ನವೆಂಬರ್ 21 ಕ್ಕೆ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ ಎಂಬ ವರದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡ ಪ್ರಸಂಗ ಶುಕ್ರವಾರ ನಡೆಯಿತು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿಎಂಗೆ ಈ ಪ್ರಶ್ನೆ ಎದುರಾಯಿತು.
ಯಾರ್ ಹೇಳಿದ್ದು? ನಿನಗೆ ಯಾರ್ ಹೇಳಿದ್ರು? ನಿನಗೆ ಹೆಂಗೆ ಗೊತ್ತಾಯ್ತು? ಯಾವ ಪತ್ರಿಕೆ? ಯಾವ ಪತ್ರಿಕೆ ನೋಡಿದೆ ನೀನು? ನಾನು ಎಲ್ಲಾ ಪತ್ರಿಕೆ ಓದುತ್ತೇನೆ. ಯಾವುದರಲ್ಲೂ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಪತ್ರಿಕೆಯ ಹೆಸರು ಹೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.
ನವೆಂಬರ್ ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಲಿದ್ದು, ಮುಖ್ಯಮಂತ್ರಿ ಬದಲಾವಣೆ ಕೂಗು ಹೆಚ್ಚಾಗಿದೆ. ಕೆಲವರು "ನವೆಂಬರ್ ಕ್ರಾಂತಿ" ಎನ್ನುತ್ತಿದ್ದಾರೆ. "ಆದಾಗ್ಯೂ, ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ನಾನೇ ಐದು ಪೂರ್ಣಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸುತ್ತಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಕೆಲ ದಿನಗಳಿಂದ ವದಂತಿಗಳು ಹಬ್ಬಿದ್ದು,, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದಗಳಾಗಿರುವುದಾಗಿ ವರದಿಗಳು ಹೇಳುತ್ತವೆ.
ಮೇ 2023 ರಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಸಿಎಂ ಹುದ್ದೆಗೆ ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಒಪ್ಪಿಸಿತ್ತು. ಆ ಸಮಯದಲ್ಲಿ ಎರಡೂವರೆ ವರ್ಷಗಳ ನಂತರ ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಒಪ್ಪಂದ ಸೂತ್ರ ಆಗಿರುವುದಾಗಿ ಹೇಳಲಾಗಿತ್ತು. ಆದರೆ, ಇದನ್ನು ಪಕ್ಷ ಅಧಿಕೃತವಾಗಿ ಖಚಿತಪಡಿಸಿಲ್ಲ.
Advertisement