ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ನಿರ್ಧಾರ: ಇಡೀ ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್ ಹೆಬ್ಬೆಟ್ಟಿನ ದಿನಗಳ ನೆನಪಿಸಲು ಹೊರಟಿದೆ..!

ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿ ಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ ನಡೆಸಿದ ಚುನಾವಣೆಗಳಲ್ಲಿ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಮುಂದಿನ ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆಗಳು) ಇವಿಎಂ ಯಂತ್ರ ಬದಿಗಿಟ್ಟು ಮತ ಪತ್ರ (ಬ್ಯಾಲಟ್ ಪೇಪರ್) ಬಳಸುವ ರಾಜ್ಯ ಸರ್ಕಾರ ನಿರ್ಧಾರವನ್ನು ರಾಜ್ಯ ಬಿಜೆಪಿ ಟೀಕಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸರ್ಕಾರದ ಸಂಪುಟದ ತೀರ್ಮಾನ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸ್ವಯಂ ಪ್ರಾಮಾಣಿಕರಿಸಿಕೊಂಡಂತಿದೆ ಎಂದು ಟೀಕಿಸಿದ್ದಾರೆ.

ಬ್ಯಾಲಟ್ ಪೇಪರ್ ಮೇಲೆ ನಂಬಿಕೆ ಇಟ್ಟಿರುವ ರಾಜ್ಯ ಸರ್ಕಾರ, EVM ಮತಯಂತ್ರ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಆರಿಸಿ ಬಂದಿರುವ 136 ಕಾಂಗ್ರೆಸ್ ಶಾಸಕರಿಂದ ಮೊದಲು ರಾಜೀನಾಮೆ ಕೊಡಿಸಲಿ, ರಾಜ್ಯದಿಂದ ಆಯ್ಕೆಯಾದ ಒಂಬತ್ತು ಕಾಂಗ್ರೆಸ್ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಿ, ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿ ಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ ನಡೆಸಿದ ಚುನಾವಣೆಗಳಲ್ಲಿ. ಅದೂ ಕಾಂಗ್ರೆಸ್ಸಿಗರ ಮೇಲೇ ಹೆಚ್ಚು ಎಂಬುದನ್ನು ಕಾಂಗ್ರೆಸ್ಸಿಗರು ಇತಿಹಾಸದ ಪುಟಗಳನ್ನು ತೆರೆದು ನೋಡಲಿ. ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿದ್ದು ಅವರು ನಡೆಸಿದ ಮತಗಳ್ಳತನ ಹಾಗೂ ಅಕ್ರಮ ಚುನಾವಣೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಿಂದ ಎಂಬ ಇತಿಹಾಸವನ್ನು ದೇಶದ ಜನ ಮರೆತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

File photo
ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ಮತ ಪತ್ರ ಆಧರಿಸಿದ ಚುನಾವಣೆಗಳಲ್ಲಿ ಅಕ್ರಮ ಹಾಗೂ ಮತಗಳ್ಳತನ ನಡೆಸುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್ಸಿಗರು ಚುನಾವಣೆಗಳ ನಿರಂತರ ಸೋಲುಗಳಿಂದ ಮೂಲೆಗುಂಪಾಗುತ್ತಿರುವ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣದಿಂದಾಗಿ ಆಧಾರ ರಹಿತ, ಅಪ್ರಬುದ್ಧ, ವಿತಂಡ ವಾದವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಬಾಲಿಶ ವಿವಾದ ಹುಟ್ಟು ಹಾಕಲು ಹೊರಟಿದ್ದಾರೆ, ಇದನ್ನು ಬೆಂಬಲಿಸಲು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರವನ್ನು ಬಳಸಿ ಚುನಾವಣೆ ನಡೆಸುವುದಾಗಿ ನಿರ್ಣಯ ಕೈಗೊಂಡಿದೆ. ಇಡೀ ದೇಶ, ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಂತ್ರಜ್ಞಾನವನ್ನು ಅಪಮಾನಿಸಿ ಹೆಬ್ಬೆಟ್ಟಿನ ದಿನಗಳನ್ನು ನೆನಪಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರವಿದ್ದ ಅವಧಿಯಲ್ಲಿ ಮತಪತ್ರ ಬಳಸಿ ನಡೆದ ಚುನಾವಣೆಗಳಲ್ಲಿ ಎಷ್ಟು ಅಕ್ರಮ ನಡೆದಿದೆ ಎನ್ನುವುದಕ್ಕೆ ಇವತ್ತಿಗೂ ದಾಖಲೆಗಳಿವೆ, 90ರ ದಶಕದಲ್ಲಿ ದಾವಣಗೆರೆಯಲ್ಲಿ ಜಯಗಳಿಸಿದ್ದ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಮರು ಎಣಿಕೆಯಲ್ಲಿ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯ ನ್ನು ಗೆಲ್ಲಿಸಲಾಯಿತು, ಬಿಜೆಪಿ ಅಭ್ಯರ್ಥಿಯ ಮತ್ರ ಪತ್ರಗಳನ್ನು ಹೇಗೆ ತಿರಸ್ಕೃತಗೊಳಿಸಲಾಯಿತು ಎಂಬುದಕ್ಕೆ ಅಂದು ದಾವಣಗೆರೆಯ ಮತ ಎಣಿಕೆ ಕೇಂದ್ರದ ಶೌಚಾಲಯಗಳಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಯ ಮತ ಪತ್ರಗಳು ಚೆಲ್ಲಾಡಿರುವುದನ್ನು ಅಂದು ಮಾಧ್ಯಮಗಳು ವರದಿ ಮಾಡಿದ್ದವು.

ಮತಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮ ಎಸೆಗಬಹುದು, ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೇ ಕಳ್ಳ ಮತದಾನವನ್ನೂ ಮಾಡಬಹುದು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ ಮತ ಪತ್ರ ಆಧರಿಸಿದ ಚುನಾವಣೆಯನ್ನು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಬೆಂಬಲಿಸುತ್ತಿದೆ, ಅದನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಮೊದಲ ಹೆಜ್ಜೆ ಇಡಲು ಹೊರಟಿದೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕ ಚುನಾವಣೆಯನ್ನು ಧಿಕ್ಕರಿಸುವುದೇ ಕಾಂಗ್ರೆಸ್‌ನ ಅಜೆಂಡಾ ಹಾಗೂ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com