ಖರ್ಗೆಗೂ ಮೀಸಲಾತಿ, ಖರ್ಗೆ ಮಗನಿಗೂ ಮೀಸಲಾತಿ; ಸಿದ್ದರಾಮಯ್ಯ ಪರ ಬೀದಿಗೆ ಇಳಿದರೆ ಕಾಗಿನೆಲೆ ಶ್ರೀಗಳ ತಲೆದಂಡ: ವಿಶ್ವನಾಥ್

ಮೀಸಲಾತಿ ಮೂಲಕ ಮೇಲೆ ಬಂದವರು ಆ ಮೀಸಲಾತಿ ಬಿಟ್ಟು ಕೊಡಲಿ. ಖರ್ಗೆಗೂ ಮೀಸಲಾತಿ, ಖರ್ಗೆ ಮಗನಿಗೂ ಮೀಸಲಾತಿ. ತಮಟೆ ಬಾರಿಸುವ ಜನ ಸಾಮಾನ್ಯನಿಗೂ ಮೀಸಲಾತಿ. ನನಗೂ ಮೀಸಲಾತಿ, ಸಾಮಾನ್ಯ ಕುರಿ ಕಾಯುವ ಜನರಿಗೂ ಮೀಸಲಾತಿ .
H Vishwanath
ಎಚ್ ವಿಶ್ವನಾಥ್
Updated on

ಮೈಸೂರು: ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು. ಉಳ್ಳವರಿಗೆ ಮೀಸಲಾತಿ ತೆಗೆದು ಹಾಕುವ ಕಾಯ್ದೆ ಸರ್ಕಾರ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಮೂಲಕ ಮೇಲೆ ಬಂದವರು ಆ ಮೀಸಲಾತಿ ಬಿಟ್ಟು ಕೊಡಲಿ. ಖರ್ಗೆಗೂ ಮೀಸಲಾತಿ, ಖರ್ಗೆ ಮಗನಿಗೂ ಮೀಸಲಾತಿ. ತಮಟೆ ಬಾರಿಸುವ ಜನ ಸಾಮಾನ್ಯನಿಗೂ ಮೀಸಲಾತಿ. ನನಗೂ ಮೀಸಲಾತಿ, ಸಾಮಾನ್ಯ ಕುರಿ ಕಾಯುವ ಜನರಿಗೂ ಮೀಸಲಾತಿ ಎಂದು ವಿಶ್ವನಾಥ್ ವ್ಯಂಗ್ಯವಾಡಿದ್ರು.

ಅಂಬೇಡ್ಕರ್ ಹೇಳಿದ್ದು ಮೀಸಲಾತಿ ಪಡೆದವರು ಬೇರೆಯವರಿಗೆ ಬಿಡಬೇಕು ಅಂದಿದ್ರು. ರಾಜಕಾರಣಿಗಳು ಬೊಗಳೆ ಭಾಷಣ ಮಾಡೋದಲ್ಲ. ಉಳ್ಳವರು ಮೀಸಲಾತಿ ಮೂಲಕ ಮೇಲಕ್ಕೆ ಬಂದವರು, ಮೀಸಲಾತಿ ಪಡೆಯದವರಿಗೆ ಬಿಟ್ಟು ಕೊಡಿ ಎಂದು ಆಗ್ರಹಿಸಿದರು. ನಾನು ಮೀಸಲಾತಿ ಬಿಟ್ಟುಕೊಡಲು ಮುಂದಾಗಿದ್ದೇನೆ ಎಂದು ವಿಶ್ವನಾಥ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಕಾಗಿನೆಲೆ ಮಹಾಸಂಸ್ಥಾನ ಕಟ್ಟುವಾಗ ಸಿದ್ದರಾಮಯ್ಯ ಯಾವುದಕ್ಕೂ ಸಹಕಾರ ಕೊಡಲಿಲ್ಲ. ಕುರುಬ ಸಮುದಾಯದ ನಾಯಕತ್ವವನ್ನು ಸಿದ್ದರಾಮಯ್ಯ ತುಳಿದರು. ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ. ನಾಯಕ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ್ದು, ಹೆಚ್.ಡಿ.ದೇವೇಗೌಡರು. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಯಾವ ಸಹಾಯವೂ ಮಾಡಿಲ್ಲ ಎಂದು ಹರಿಹಾಯ್ದರು.

H Vishwanath
ಸಿದ್ದರಾಮಯ್ಯ ಸರ್ಕಾರದ ವಿರುದ್ಧ SC ಒಳಮೀಸಲಾತಿ ಕಿಚ್ಚು: ಫ್ರೀಡಂ ಪಾರ್ಕ್‌ನಲ್ಲಿ ಸ್ಪೃಶ್ಯ ಸಮುದಾಯದಿಂದ ಉಗ್ರ ಹೋರಾಟ, ಆತ್ಮಹತ್ಯೆಗೆ ಮಹಿಳೆ ಯತ್ನ!

ಕುರುಬ ಸಮುದಾಯ ಕಷ್ಟದಲ್ಲಿದ್ದಾಗ ಯಾವ ಹೋರಾಟದಲ್ಲೂ ಯಾರಿಗೂ ಬೆಂಬಲ ಕೊಟ್ಟಿಲ್ಲ. ಸಿದ್ದರಾಮಯ್ಯ ಮಾತು ಕೇಳಿ ಕುರುಬ ಸಮುದಾಯದ ಸ್ವಾಮೀಜಿಗಳು ಬೀದಿಗಿಳಿಯಬಾರದು. ಒಂದು ವೇಳೆ ಬೀದಿಗೆ ಬಂದರೆ ತಲೆದಂಡವಾಗಬೇಕಾಗುತ್ತದೆ ಹುಷಾರ್ ಅಂತ ವಿಶ್ವನಾಥ್ ಎಚ್ಚರಿಸಿದ್ದಾರೆ. ನಿಮ್ಮನ್ನು ಸ್ವಾಮಿ ಮಾಡಿದ್ದು ನಾನು. ಮೊದಲ ಪೀಠಧ್ಯಕ್ಷ ಆಗಿದ್ದು ನಾನು. ಸಿದ್ದರಾಮಯ್ಯ ಪರ ಬೀದಿಗೆ ಬರಬೇಡಿ ಎಂದು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಕುರುಬ ಸಮುದಾಯದ ಯುವಕರಿಗೆ ಒಂಥರ ಇಂಗ್ಲಿಷ್ ಸಿನಿಮಾ ಹೀರೋ ಥರ ಕಾಣುತ್ತಾರೆ. ಇಂಗ್ಲಿಷ್ ಸಿನಿಮಾ ಅರ್ಥ ಆಗದಿದ್ದರೂ ಶಿಳ್ಳೆ ಹೊಡೆದಂತೆ, ಸಿದ್ದರಾಮಯ್ಯ ಏನೂ ಮಾಡದಿದ್ದರೂ ಶಿಳ್ಳೆ ಹೊಡೆಯುತ್ತಾರೆ ಎಂದು ಲೇವಡಿ ಮಾಡಿದರು.

ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದಕ್ಕೆ ಸ್ವಾಗತವಿದೆ. ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯದ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

ಕುರುಬ ಸಮುದಾಯವನ್ನು ಸರ್ಕಾರ ಪ. ವರ್ಗಕ್ಕೆ ಸೇರಿಸಿದ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಇದಕ್ಕೆ ಎಂದೂ ಪರವಾಗಿರಲಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಪ್ರಕ್ರಿಯೆ ನಡೆದಿತ್ತು. ಕುಲ ಶಾಸ್ತ್ರೀಯ ಅಧ್ಯಯನವನ್ನು ಬೊಮ್ಮಾಯಿ ಸರ್ಕಾರ ಮಾಡಿತ್ತು. ಈಗಲೂ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರಕ್ಕೆ ಈ ನಿರ್ಣಯವನ್ನು ರಾಜ್ಯ ಸರ್ಕಾರ ಕಳಿಸಿಲ್ಲ. ಸಿದ್ದರಾಮಯ್ಯಗೆ ಈಗ ಕಷ್ಟಕಾಲ. ಸಂತೋಷವಿದ್ದಾಗ ಕುರುಬರನ್ನು ಒದ್ದಿದ್ದಾರೆ. ಕಷ್ಟ ಬಂದಾಗ ಕುರುಬರ ನೆನಪಾಗಿದೆ. ಸಿಎಂ ಕುರ್ಚಿ ಹತ್ತಿರಕ್ಕೆ ಡಿಕೆ ಶಿವಕುಮಾರ್ ಬಂದಿದ್ದಾರೆ. ಹೀಗಾಗಿ ಕುರುಬರನ್ನು ತಮ್ಮ ರಕ್ಷಣೆಗೆ ಸಿದ್ದರಾಮಯ್ಯ ಕರೆಯುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com