ನವದೆಹಲಿ/ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳ ಮತದಾರರನ್ನು ಡಿಲೀಟ್ ಮಾಡುವ ಗುರಿ ಇತ್ತು ಎಂದು ಆಳಂದ್ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಗುರುವಾರ ಆರೋಪಿಸಿದ್ದಾರೆ.
2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ ಪಾಟೀಲ್ ಅವರು 10,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಇಂದು ಮತಗಳ್ಳತನದ ಬಗ್ಗೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಲೋಕಸಭೆ ಪ್ರತಿಫಕ್ಷ ನಾಯಕ ರಾಹುಲ್ ಗಾಂಧಿ ಅವರು ಆಳಂದ್ ಕ್ಷೇತ್ರದ ಉದಾಹರಣೆಯನ್ನು ಉಲ್ಲೇಖಿಸಿದರು.
ನಂತರ, ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, "ಮತಗಳ ಅಳಿಸುವಿಕೆ ಬಗ್ಗೆ ನನಗೆ ತಿಳಿದಾಗ, ನಾನು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಇಬ್ಬರೂ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿ ಬಳಿಗೆ ಹೋದೆವು. ನಂತರ ನಾವು ಪತ್ರಿಕಾಗೋಷ್ಠಿ ನಡೆಸಿದೆವು.
ನನ್ನನ್ನು ಸೋಲಿಸಲು ಪಿತೂರಿ ನಡೆದಿದೆ. ಮತದಾರರನ್ನು ಡಿಲೀಟ್ ಮಾಡಲು ಯಾರೋ ಚುನಾವಣಾ ಆಯೋಗದ ಫಾರ್ಮ್-7 ಅಡಿಯಲ್ಲಿ ವಿನಂತಿ ಕಳುಹಿಸಿದ್ದಾರೆ. ಈ ಸಂಬಂಧ ಆಗಿನ ಚುನಾವಣಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಆಳಂದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಆದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ಸಿಐಡಿಗೆ ವಹಿಸಿತ್ತು. ಆದರೆ ಸಿಐಡಿ ತನಿಖೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತನಿಖೆ ಸ್ಥಗಿತಗೊಂಡಿದೆ ಎಂದರು.
"ನನ್ನ ಕ್ಷೇತ್ರದಲ್ಲಿ ನನ್ನ ಬೆಂಬಲಿಗ ಮತದಾರರನ್ನು ಡಿಲೀಟ್ ಮಾಡಲು" ಎಂದು ವಿನಂತಿಸಲಾಗಿದೆ. ನಾನು ಪ್ರಬಲವಾಗಿದ್ದ ಪ್ರದೇಶದಲ್ಲಿ ನನ್ನ ಕಾರ್ಯಕರ್ತರು ಮತ್ತು ನನ್ನ ಬೆಂಬಲಿಗರ ಮೇಲೆ ದಾಳಿ ನಡೆಸಲಾಯಿತು ಎಂದು ಕಾಂಗ್ರೆಸ್ ಶಾಸಕ ಆರೋಪಿಸಿದರು.
ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಯ ಮತಗಳು ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದು, ಅವರನ್ನೇ ಡಿಲೀಟ್ ಮಾಡಲು ಗುರಿ ಇತ್ತು ಎಂದು ಶಾಸಕರು ಹೇಳಿದರು.
ಸಂಪೂರ್ಣ ತನಿಖೆ ನಡೆಸಿದರೆ ಹೆಚ್ಚಿನ ವಿವರಗಳು ಹೊರಬರುತ್ತವೆ. "ಆದರೆ ತನಿಖೆ ನಡೆಯುತ್ತಿಲ್ಲ ಎಂದು ಪಾಟೀಲ್ ಹೇಳಿದರು.
ದೂರುದಾರರು ಸ್ವತಃ ಚುನಾವಣಾ ಅಧಿಕಾರಿಯಾಗಿರುವುದರಿಂದ ಪುರಾವೆಗಳು ಲಭ್ಯವಿದೆ ಮತ್ತು ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
Advertisement