
ಬೆಂಗಳೂರು: ಮತಗಳ್ಳತನ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಭಾರತೀಯ ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ನೀಡಲಿ ಅಥವಾ ನ್ಯಾಯಾಲಯದ ಮೊರೆ ಹೋಗಲಿ ಎಂದು ಬಿಜೆಪಿ ಗುರುವಾರ ಸವಾಲು ಹಾಕಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ರಾಹುಲ್ ಗಾಂಧಿಯವರ 'ವೋಟ್ ಚೋರಿ' ನಾಟಕ ಚುನಾವಣಾ ಆಯೋಗದ ಮೇಲೆ ದಾಳಿ ಮಾಡಲು ಮತ್ತು ಜನರ ಜನಾದೇಶವನ್ನು ಅವಮಾನಿಸಲು ಕಾಂಗ್ರೆಸ್ ರಚಿಸುವ ಒಂದು ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.
ಆಳಂದದಲ್ಲಿ 2018ರಲ್ಲಿ ಬಿಜೆಪಿಗೆ 76,815 (ಶೇ.47.83)ರಷ್ಟು ಜನಾದೇಶ ಸಿಕ್ಕಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ 76,118 (ಶೇ.47.39) ಸಿಕ್ಕಿತ್ತು. 2023ರಲ್ಲಿ ಬಿಜೆಪಿಗೆ 79,160 (ಶೇ.45.34) ರಷ್ಟು ಮತ್ತು ಕಾಂಗ್ರೆಸ್ ಪಕ್ಷಕ್ಕೆ 89,508 (ಶೇ.51.27) ಮತಗಳು ಸಿಕ್ಕಿದ್ದವು. ಬಿಜೆಪಿ ಪರ ಮತಗಳು ಕುಸಿದು, ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿತ್ತು. ಆಳಂದ ಕ್ಷೇತ್ರದ ಜನರು ಕಾಂಗ್ರೆಸ್ ಪರ ಜನಾದೇಶ ನೀಡಿದ್ದರು. ಇದನ್ನು ಬಿಜೆಪಿ ಒಪ್ಪಿಕೊಂಡಿತ್ತು.
ಆದರೆ, ಕುರುಡಾಗಿರುವ ಕಾಂಗ್ರೆಸ್ ಕೇಂದ್ರದಲ್ಲಿ ಪದೇ ಪದೇ ಸೋಲು ಕಂಡಿದ್ದರೂ, ಜನಾದೇಶವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಹೀಗಾಗಿ, ರಾಹುಲ್ ಗಾಂಧಿಯವರು ವೋಟ್ ಚೋರಿ ಎಂಬ ಪಿತೂರು ಶುರುಮಾಡಿದ್ದಾರೆ. ಮತಗಳ್ಳತನವಾಗಿದೆ ಎಂದು ನಿಜಕ್ಕೂ ಕಾಂಗ್ರೆಸ್'ಗೆ ಎನಿಸುತ್ತಿದ್ದಾರೆ, ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ನೀಡಲಿ. ಅಥವಾ ಕೋರ್ಟ್ ಮೊರೆ ಹೋಗಲಿ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಎರಡಕ್ಕೂ ಸತ್ಯ ಅಥವಾ ಹೊಣೆಗಾರಿಕೆಯಲ್ಲಿ ಆಸಕ್ತಿ ಇಲ್ಲ. ಕಾಂಗ್ರೆಸ್ ನಾಯಕರ ರಾಜಕೀಯ ಸುಳ್ಳಿನಿಂದ ಪ್ರಾರಂಭವಾಗುತ್ತದೆ ಮತ್ತು ಸುಳ್ಳಿನಿಂದ ಕೊನೆಗೊಳ್ಳುತ್ತದೆ. ಹೀಗಾಗಿ ಇಸಿಐನಂತಹ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ರಾಹುಲ್ ಅವರು ಯಾರೋ ಬರೆದುಕೊಟ್ಟಿದ್ದನ್ನು ಪದೇ ಪದೇ ಹೇಳಿ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ಟೀಕಿಸಿದರು.
ಆಳಂದ ಬಹಳ ದೂರ ಇದೆ. ಬೆಂಗಳೂರು ಪಕ್ಕದ ಮಾಲೂರಿನಲ್ಲಿ ಮತಗಳ್ಳತನ ಎಂದು ಕೋರ್ಟ್ ಆದೇಶ ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿ, ಕೋರ್ಟ್ ಆದೇಶವಿದ್ದರೂ ಸಿಸಿ ಟಿವಿ ಮಾಹಿತಿಯನ್ನು ಕೇಳಿದ್ದರೂ ಕೊಟ್ಟಿಲ್ಲ. ಅಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಸದಸ್ಯತ್ವ ವಜಾ ಆಗಿದೆ. ಇದಕ್ಕಿಂತ ಸಾಕ್ಷಿ ಬೇಕೇ ಎಂದು ಕೇಳಿದರು.
ಅಫಿಡವಿಟ್ ಕೊಡಿ ಎಂದು ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ಕೇಳಿದ್ದರೂ ಕೊಟ್ಟಿಲ್ಲ; ಮಾಲೂರಿನಲ್ಲಿ ನಮ್ಮ ಅಭ್ಯರ್ಥಿ ಅಫಿಡವಿಟ್ ಕೊಟ್ಟು, ತನಿಖೆಗೆ ಹೈಕೋರ್ಟಿಗೆ ವಿನಂತಿಸಿದ್ದರು. ಹೈಕೋರ್ಟ್, ಡಿಸಿ ತಪ್ಪು ಮಾಡಿದ್ದಾಗಿ ತಿಳಿಸಿ ಕ್ರಮ ಕೈಗೊಳ್ಳಲು ಆದೇಶ ಮಾಡಿದೆ. ರಾಹುಲ್ ಗಾಂಧಿಯವರಿಗೆ ಇದರ ಜ್ಞಾನ ಇಲ್ಲವೇ ಕಾಂಗ್ರೆಸ್ ನಾಯಕರು ಮೊದಲು ಅದರ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದರು.
ಬಿಹಾರದಲ್ಲಿ ಸೋಲುವ ಹತಾಶೆ ರಾಹುಲ್ ಗಾಂಧಿಗೆ ಶುರುವಾಗಿದೆ. ಇದುವರೆಗೆ ಅವರು ಸಿಡಿಸಿದ ಪಟಾಕಿಗಳು ಠುಸ್ ಆಗಿದೆ. ಚುನಾವಣಾ ಆಯೋಗ 45 ಗಂಟೆಗಳ ಸಮಯಾವಕಾಶ ಕೊಟ್ಟಿರುತ್ತೆ. ಆಗೇನು ಮಾಡ್ತಿದ್ರು ಕಾಂಗ್ರೆಸ್‌ನವ್ರು? ಮತ ಅಕ್ರಮಕ್ಕೆ ದಾಖಲೆ ಇದ್ದಿದ್ರೆ ಯಾಕೆ ಆಕ್ಷೇಪಣೆ ಸಲ್ಲಿಸಲಿಲ್ಲ? ಇದಕ್ಕೆ ಉತ್ತರ ಕೊಡಿ ಎಂದು ಸವಾಲು ಹಾಕಿದರು.
ಬಿಜೆಪಿಯನ್ನು, ಚುನಾವಣಾ ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಬೇಕು. ಇದೊಂದೇ ಕಾಂಗ್ರೆಸ್ ಅಜೆಂಡಾ. ಅದಕ್ಕಾಗಿ ಬಾಲಿಷ ಆರೋಪಗಳನ್ನು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲೂ ಎಸ್‌ಐಆರ್ ಗೆ ಚುನಾವಣಾ ಆಯೋಗ ನಿರ್ಧಾರ ವಿಚಾರವಾಗಿ, ಹಲವು ಮುಸ್ಲಿಮರು ಎರಡು ಮೂರು ಕಡೆ ಓಟ್ ಇಟ್ಕೊಂಡಿದ್ದಾರೆ. ಇದರ ಜತೆ ಅಕ್ರಮ ಬಾಂಗ್ಲಾ, ಪಾಕಿಸ್ತಾನಿಗಳು ಇಲ್ಲಿ ಓಟ್ ಕಾರ್ಡ್ ಪಡೆದಿದ್ದಾರೆ. ಇವರೆಲ್ಲ ಯಾರು? ಎಂದು ಪ್ರಶ್ನಿಸಿದರು.
ಇಲ್ಲಿ ಬಾಂಗ್ಲಾದಿಂದ ಬಂದು ತಳವೂರುತ್ತಿದ್ದಾರೆ. ಇಂತಹ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಆಯೋಗ ಹೊರಟಿದೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ನವ್ರಿಗೆ ಏನು ಕಷ್ಟ? ಒಬ್ಬರಿಗೆ ಒಂದೇ ಓಟ್ ಇರಬೇಕು. ಆಯೋಗದ ತೀರ್ಮಾನಕ್ಕೆ ನಮ್ಮ ಸ್ವಾಗತ ಇದೆ ಎಂದರು.
Advertisement