
ಬೆಂಗಳೂರು: ಜಾತಿಗಣತಿ ಸಮೀಕ್ಷೆ ಕುರಿತು ಉಂಟಾಗಿರುವ ಗೊಂದಲ ಸಂಬಂಧ ಶನಿವಾರ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖಾಮುಖಿಯಾಗಿದರು.
ಆದಿಚುಂಚಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಡಿಕೆ.ಶಿವಕುಮಾರ್ ಮತ್ತು ಹೆಚ್‌ಡಿ.ಕುಮಾರಸ್ವಾಮಿ ಇಬ್ಬರೂ ಮುಖಾಮುಖಿಯಾದರು.
ಸಭೆಗೆ ಹಾಜರಾದ ಕುಮಾರಸ್ವಾಮಿ ಅವರಿಗೆ ಕುರ್ಚಿಯಲ್ಲಿ ಕುಳಿತಿದ್ದ ಡಿಕೆ.ಶಿವಕುಮಾರ್ ಅವರು ಕೈಮುಗಿದು ನಮಸ್ಕರಿಸಿದರು. ಡಿಸಿಎಂ ಕೂಡ ಪ್ರತಿಯಾಗಿ ನಮಸ್ಕರಿಸಿದರು.
ಬಳಿಕ ಸ್ವಾಮೀಜಿ ಪಕ್ಕದಲ್ಲಿ ಹೆಚ್‌ಡಿ.ಕುಮಾರಸ್ವಾಮಿಯವರು ಕೂರುವುದಕ್ಕೆ ಜಾಗ ಮಾಡಿಕೊಟ್ಟರು. ಈ ಮೂಲಕ ಇಬ್ಬರೂ ನಾಯಕರು ಅಚ್ಚರಿ ಮೂಡಿಸಿದರು.
ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿಯವರು, ಸಮುದಾಯದ ಕುಂದುಕೊರತೆಗಳನ್ನು ಪರಿಹರಿಸದೆ ಕೇವಲ ಹದಿನೈದು ದಿನಗಳಲ್ಲಿ ತರಾತುರಿಯಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಸರ್ಕಾರ ಜನಗಣತಿಯನ್ನು ಮುಂದುವರಿಸಿದರೆ, ಅದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತದೆ ಎಂದು ಹೇಳಿದರು.
ಹೊಸ ಸಮೀಕ್ಷೆಯು ಕಾಂತರಾಜು ಆಯೋಗ ನಡೆಸಿದ ಹಿಂದಿನ ಸಮೀಕ್ಷೆಗಿಂತ ಕೆಟ್ಟದಾಗಿರುತ್ತದೆ. ಇದು ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಕಾಂಗ್ರೆಸ್ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮೀಕ್ಷೆಯಲ್ಲಿ ಸರ್ಕಾರ ಸಮುದಾಯಕ್ಕೆ ಯಾವುದೇ ಅನ್ಯಾಯ ಮಾಡಿದರೆ, ಶ್ರೀಗಳ ನೇತೃತ್ವದಲ್ಲಿ ಭವಿಷ್ಯದ ಹೋರಾಟದ ಚೌಕಟ್ಟು ಕುರಿತು ಚರ್ಚಿಸಲಾಗಿದೆ. ರಾಜ್ಯದಲ್ಲಿ ಅಶಾಂತಿ ಉಂಟಾಗಲು ಸರ್ಕಾರ ಎಲ್ಲವನ್ನೂ ಮಾಡಿದೆ. ಇದರ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ನೋಡಲಿದೆ ಎಂದು ತಿಳಿಸಿದರು.
ಒಕ್ಕಲಿಗರು ಜಾತಿ ಸಂಬಂಧಿತ ವಿಷಯಗಳಲ್ಲಿ ದೊಡ್ಡ ಹಿನ್ನಡೆಯನ್ನು ಎದುರಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಒಕ್ಕಲಿಗರು ತಮ್ಮ ಭೂಮಿ ಕಳೆದುಕೊಂಡಿದ್ದಾರೆಂದು ಹೇಳಿದರು.
Advertisement