
ನವದೆಹಲಿ: ರಾಜ್ಯ ರಾಜಕೀಯದಲ್ಲಿ ಸುದ್ದಿಲ್ಲದೇ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ ಗೆ ಎರಡುವರೆ ವರ್ಷ ಪೂರ್ಣಗೊಳಿಸುತ್ತದೆ. ಹೀಗಾಗಿ ನವೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ.
ಇದಕ್ಕೆ ಪೂರಕವೆಂಬಂತೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ. ಈ ವೇಳೆ ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು.
ಸಚಿವ ಸ್ಥಾನದಿಂದ ಹೊರ ಬಂದವರಿಗೆ ಪಕ್ಷ ಸಂಘಟನೆಯ ಕೆಲಸ ವಹಿಸಲಾಗುತ್ತದೆ. ಇನ್ನು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿದ್ದು, ಎರಡು ದಶಕಗಳಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ರಿಗೆ ಸಚಿವ ಸ್ಥಾನ ನೀಡಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
ಇದೇ ವೇಳೆ ಮತಾಂತರದ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ, ಅದು ಪಕ್ಷ ಅಥವಾ ಸರ್ಕಾರದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು.
ಕೆಎನ್ ರಾಜಣ್ಣ ಅವರು “ಜಾತಿಗಳಿಗೆ ಕ್ರಿಶ್ಚಿಯನ್ ಧರ್ಮದ ಹೆಸರು ಸೇರಿಸುವುದರಿಂದ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದ್ದರು.
Advertisement