ಚುನಾವಣಾ ಆಯೋಗ ದುರುಪಯೋಗ ಆರೋಪ ಹೊತ್ತ ಏಕೈಕ ಪ್ರಧಾನಿ ಮೋದಿ: ಸಿದ್ದರಾಮಯ್ಯ

ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಚುನಾವಣಾ ಆಯೋಗದ ದುರುಪಯೋಗದ ಯಾವುದೇ ಆರೋಪಗಳು ಕೇಳಿಬಂದಿರಲಿಲ್ಲ ಎಂದರು. ಕಾಂಗ್ರೆಸ್ ಯಾವತ್ತೂ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳಿದರು.
Siddaramaiah
ಸಿದ್ದರಾಮಯ್ಯ
Updated on

ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಆಯೋಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವುದರಿಂದಲೇ ಮತದಾರರ ಪಟ್ಟಿಯ ದುರುಪಯೋಗದ ಆರೋಪಗಳನ್ನು ಎದುರಿಸಿದ ಏಕೈಕ ಪ್ರಧಾನಮಂತ್ರಿ ಮೋದಿ ಎಂದು ಹೇಳಿದ್ದಾರೆ.

ನಿನ್ನೆ ಬುಧವಾರ ದಾವಣಗೆರೆ ಬಾಪೂಜಿ ಎಂ.ಬಿ.ಎ ಕಾಲೇಜು ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಚುನಾವಣಾ ಆಯೋಗದ ದುರುಪಯೋಗದ ಯಾವುದೇ ಆರೋಪಗಳು ಕೇಳಿಬಂದಿರಲಿಲ್ಲ ಎಂದರು. ಕಾಂಗ್ರೆಸ್ ಯಾವತ್ತೂ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ಹೂಡಿಕೆಗಳ ದೃಷ್ಟಿಯಿಂದ ರಾಜ್ಯದ ಆರ್ಥಿಕ ಸ್ಥಿತಿ ದೃಢವಾಗಿದೆ ಎಂದು ಹೇಳಿದರು. ರಾಜ್ಯದ ಆರ್ಥಿಕ ಸ್ಥಿತಿ ದೇಶದಿಗಿಂತ ಉತ್ತಮವಾಗಿದೆ ಎಂದರು.

ದೇಶದ ಜಿಡಿಪಿ ದರ 7.14 ಶೇಕಡಾ ಇದ್ದರೆ, ರಾಜ್ಯದ ಜಿಡಿಪಿ ದರ 8.1 ಶೇಕಡಾ ಇದೆ ಎಂದು ಹೇಳಿದರು. ಯಾವ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮ ಎನ್ನುವುದನ್ನು ನೋಡಬೇಕು. ರಾಜಕೀಯ ಆರೋಪಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಸಾಲ 5.30 ಲಕ್ಷ ಕೋಟಿ ರೂಪಾಯಿ ಇತ್ತು. 2019ರಿಂದ 2023ರವರೆಗೆ ಬಿಜೆಪಿ ಆಡಳಿತದಲ್ಲಿತ್ತು. 2027ರ ಮಾರ್ಚ್ ವೇಳೆಗೆ ರಾಜ್ಯದ ಸಾಲ 8.24 ಲಕ್ಷ ಕೋಟಿ ರೂಪಾಯಿಗೆ ಏರಲಿದೆ. ಹೆಚ್ಚು ಸಾಲ ತೆಗೆದುಕೊಂಡದ್ದು ಯಾರು ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಒಟ್ಟು ಸಾಲ 53.11 ಲಕ್ಷ ಕೋಟಿ ರೂಪಾಯಿ ಇತ್ತು. ಇದು ಸ್ವಾತಂತ್ರ್ಯ ದಿನದಿಂದ 2013ರವರೆಗೆ ಎಲ್ಲಾ ಸರ್ಕಾರಗಳು ತೆಗೆದುಕೊಂಡ ಸಾಲ. ಈಗ ಅದು 218 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಕಳೆದ 12 ವರ್ಷಗಳಲ್ಲಿ ಮೋದಿ ತೆಗೆದುಕೊಂಡ ಸಾಲ 165 ಲಕ್ಷ ಕೋಟಿ ರೂಪಾಯಿ ಆಗಿದೆ. ಈಗ ಮೋದಿಯನ್ನು ಏನು ಎಂದು ಕರೆಯಬೇಕು ಎಂದು ಟೀಕಿಸಿದರು.

ಸಮಾಜಮುಖಿ ಆರ್ಥಿಕತೆ
ಪ್ರಪಂಚದಲ್ಲಿ ಎರಡು ರೀತಿಯ ಆರ್ಥಿಕ ವ್ಯವಸ್ಥೆಗಳಿವೆ. ಒಂದು ಮೇಲ್ವರ್ಗಕ್ಕೆ ಅನುಕೂಲವಾಗುವುದು, ಮತ್ತೊಂದು ಕೆಳವರ್ಗದವರ ಅಭಿವೃದ್ಧಿಗೆ ಸಹಾಯಕವಾಗುವುದು. ಬಿಜೆಪಿ ಮೇಲ್ವರ್ಗ ಪರವಾಗಿದ್ದರೆ, ಕಾಂಗ್ರೆಸ್ ಕೆಳವರ್ಗದ ಸಮೃದ್ಧಿಗೆ ಕೆಲಸ ಮಾಡುತ್ತಿದೆ. ಬಸವಣ್ಣ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಆಶಯದಂತೆ ಹಿಂದುಳಿದವರ ಕಣ್ಣೀರನ್ನು ಒರೆಯಲು ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದ ಅವರು, ಬಡವರಿಗಾಗಿ ಇರುವ ಯೋಜನೆಗಳಿಗೆ ಬಿಜೆಪಿ ಯಾವತ್ತೂ ವಿರೋಧವಾಗಿದೆ. ನಾವು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಹಣವನ್ನು ನೇರವಾಗಿ ಲಾಭಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದೇವೆ. ಇದರಿಂದ ಭ್ರಷ್ಟಾಚಾರ ತಪ್ಪುತ್ತದೆ. ಬಿಜೆಪಿ ಆರೋಪಗಳಲ್ಲಿ ಯಾವುದೇ ತೂಕವಿಲ್ಲ ಎಂದು ಪ್ರತಿಕ್ರಿಯಿಸಿದರು.

2019ರಿಂದ 2023ರವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಅಭಿವೃದ್ಧಿಗಾಗಿ ಹೆಚ್ಚಿನ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಅವರು, ಮಧ್ಯ ಕರ್ನಾಟಕದ ದಾವಣಗೆರೆಗೆ ಅವರು ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ನಾವು ಭಾರೀ ಬಹುಮತದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಪ್ರಿಲ್ 5ರಿಂದ ಜಮೀರ್ ಪ್ರಚಾರ
ವಸತಿ ಸಚಿವ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಏಪ್ರಿಲ್ 5ರಿಂದ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಜಮೀರ್ ಅವರಿಗೆ ಕೇರಳ ಚುನಾವಣೆಗಳ ಜವಾಬ್ದಾರಿ ನೀಡಲಾಗಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿದ್ದೇನೆ. ಏಪ್ರಿಲ್ 4 ನಂತರ ಜಮೀರ್ ಅವರನ್ನು ಕರ್ನಾಟಕಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com