ಯತ್ನಾಳ್‌ ಸ್ವಾಭಿಮಾನ ಎಲ್ಲಿ ಹೋಯ್ತು? ಪಾಟೀಲ್‌ ಜತೆ ಸೇರಿ ನಮಾಜ್‌ ಮಾಡಿದ್ದೆ, ಅದಕ್ಕೆ ಪಶ್ಚಾತ್ತಾಪಪಟ್ಟಿದ್ದೇನೆ: ಯತ್ನಾಳ್‌ v/s ಪಾಟೀಲ್; Video

ಬಿಜೆಪಿಯಲ್ಲಿ ಅಪಮಾನ ಮಾಡಿ ಯತ್ನಾಳ್ ಅವರನ್ನು ಹೊರಹಾಕಲಾಗಿದೆ. ಈಗ ಮಾನ-ಮರ್ಯಾದೆ ಬಿಟ್ಟು ಪ್ರಚಾರಕ್ಕೆ ಹೋಗಿದ್ದಾರೆ. ಹಾಗಾದರೆ, ಯತ್ನಾಳ್ ಸ್ವಾಭಿಮಾನ ಎಲ್ಲಿ ಹೋಯ್ತು.
ಎಂಬಿ ಪಾಟೀಲ್
ಎಂಬಿ ಪಾಟೀಲ್
Updated on

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಮರಳಿ ಬಿಜೆಪಿ ಸೇರುವ ಸಲುವಾಗಿ ಬಾಗಲಕೋಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ಮಾಡುವ ನಾಟಕ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ದಾರೆ.

ಬಾಗಲಕೋಟೆ ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಚಾರ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತನಾಡುತ್ತಾರೆ.

ಬಾಗಲಕೋಟೆ ಅಭ್ಯರ್ಥಿ ಚರಂತಿಮಠ ಅವರು ಯಡಿಯೂರಪ್ಪ ಹಾಗೂ ಗೋವಿಂದ ಕಾರಜೋಳ ಬಣದವರು. ಇವರ ಬಣದವರ ಪ್ರಚಾರಕ್ಕೆ ಯತ್ನಾಳ್ ಹೊರಟಿದ್ದಾರೆ. ಅದೇ ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಬಣವಲ್ಲ, ಮಾಜಿ ಸಂಸದ ಸಿದ್ದೇಶ್ವರ ಬಣದವರು. ಯಡಿಯೂರಪ್ಪ ಅವರಿಗೆ ಹೇಳದೇ ಅಲ್ಲಿ ಬಿಜೆಪಿ ಟಿಕೆಟ್ ನೀಡಲಾಗಿದೆ. ಹೀಗಾಗಿ ಯತ್ನಾಳ ಸುಮ್ಮನೇ ನಾಟಕ ಮಾಡುತ್ತಿದ್ದಾರೆ ಎಂದರು.

ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯಲ್ಲಿ ಅಪಮಾನ ಮಾಡಿ ಯತ್ನಾಳ್ ಅವರನ್ನು ಹೊರಹಾಕಲಾಗಿದೆ. ಈಗ ಮಾನ-ಮರ್ಯಾದೆ ಬಿಟ್ಟು ಪ್ರಚಾರಕ್ಕೆ ಹೋಗಿದ್ದಾರೆ. ಹಾಗಾದರೆ, ಯತ್ನಾಳ್ ಸ್ವಾಭಿಮಾನ ಎಲ್ಲಿ ಹೋಯ್ತು? ಸುಮ್ಮನೆ ನನ್ನನ್ನು ಬಿಜೆಪಿಗೆ ವಾಪಸ್ ತೆಗೆದುಕೊಳ್ಳಿ ಅಂತಾ ಯತ್ನಾಳ್ ಕೈಮುಗಿದು ಕೇಳಿಕೊಳ್ಳಲಿ ಎಂದರು.

ಇನ್ನೂ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಸಚಿವ ಎಂ.ಬಿ.ಪಾಟೀಲ್‌ ಜತೆಗೂಡಿ ಹಿಂದೆ ನಮಾಜ್‌ ಮಾಡಿದ್ದು ನಿಜ. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಟ್ಟಿದ್ದೇನೆ. ಆದರೂ ಜೈ ಶ್ರೀರಾಮ ಅನ್ನೋದು ಯಾವಾಗಲೂ ನನ್ನಲ್ಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಲಿಂಗಾಯತ ಒಳ ಪಂಗಡದ ಪ್ರಮುಖರ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಾನು ಮತ್ತು ಯತ್ನಾಳ್‌ ಕೂಡಿಯೇ ನಮಾಜ್‌ ಮಾಡಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಹೌದು, ನಾವು ನಮಾಜ್‌ ಮಾಡಿದ್ದೇವೆ. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಟ್ಟಿದ್ದೇನೆ. ಜೈ ಶ್ರೀರಾಮ್ ಅನ್ನೋದು ಯಾವಾಗಲೂ ನನ್ನಲ್ಲಿದೆ. ಬರೀ ಅದೇ ಕಥೆ ಹೇಳೋದು ಬೇಡ. ಎಂ.ಬಿ.ಪಾಟೀಲ್‌ ಸೋಲಿಸಲು ವಿಜಯಪುರದಲ್ಲಿ ಒಬ್ಬ ಮಂತ್ರಿ ಕೆಲಸ ಮಾಡಿದ್ದಾರೆ. ಮೊದಲು ಮುಂದಿನ ಬಾರಿ ಅವರನ್ನು ಸೋಲಿಸಲಿ ಎಂದರು.

ಎಂಬಿ ಪಾಟೀಲ್
ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ ಪಾಟೀಲ್ ಸಮರ್ಥನೆ

ನಾನು ಬಿಜೆಪಿಲ್ಲಿ ಇದ್ದವನು. ಯಾವ್ಯಾವುದೋ ಕಾರಣದಿಂದ ಉಚ್ಚಾಟನೆ ಆಗಿರಬಹುದು. ಉಚ್ಚಾಟನೆ ಆದರೂ ಸಹಿತ ನಾನು ಮತ್ತು ಚರಂತಿಮಠ ಆತ್ಮೀಯರಾಗಿದ್ದೇವೆ. ಎಲ್ಲರ ಜತೆ ಒಳ್ಳೆಯ ಸಂಬಂಧವಿದೆ. ನಾನು ಪಕ್ಷ ವಿರೋಧಿ ಮತ್ತು ಬ್ಲ್ಯಾಕ್‌ಮೇಲ್‌ ಸ್ವಭಾವದವನಲ್ಲ. ಕಾಂಗ್ರೆಸ್‌ನಿಂದ ಯಾವುದೇ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಚರಂತಿಮಠ ಹಾಗೂ ನಮ್ಮದು ವೈಯಕ್ತಿಕವಾಗಿ ಒಳ್ಳೆಯ ಸಂಬಂಧವಿದೆ. ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಆರ್ಥಿಕ ಸಹಾಯ ಕೂಡ ಮಾಡಿದ್ದಾರೆ. ಆ ಕಾರಣಕ್ಕೆ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ‌ ಎಂದರು.

ಮಾನ-ಮರ್ಯಾದೆ ಇದ್ದರೆ ಬಿಜೆಪಿ ಪರ ಪ್ರಚಾರಕ್ಕೆ ಬರಬಾರದು ಎಂದು ಕೆಲವರು ಹೇಳಿದ್ದಾರೆ. ಇವರ ಸ್ವಾಭಿಮಾನ, ಮಾನ-ಮರ್ಯಾದೆ ಏನು ಅಂತ ನನಗೆ ಗೊತ್ತಿದೆ. ನಾನು ಎಂದೂ ಬಿಜೆಪಿಗೆ ದ್ರೋಹ ಮಾಡುವ ಕೆಲಸ ಮಾಡಲ್ಲ. ನಾನು ಬಿಜೆಪಿಯಿಂದ ಶಾಸಕ ಆದವನು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com