'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ತಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈಯಕ್ತಿಕವಾಗಿ ತನಗೆ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್​​ ಗಣಿಗ ತಿಳಿಸಿದ್ದಾರೆ.
Ravikumar Ganiga
ರವಿಕುಮಾರ್ ಗಣಿಗ
Updated on

ಮಂಡ್ಯ : ಮೊದಲ ಬಾರಿ ಶಾಸಕರಾದವರಿಗೂ ಸಚಿವ ಸ್ಥಾನ ಸಿಗಬೇಕು ಎನ್ನುವುದು ನಮ್ಮ ಆಗ್ರಹ ಇದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. 38 ಮಂದಿ ನಾವು ಈ ಬಗ್ಗೆ ಪತ್ರ ಕೊಟ್ಟಿದ್ದೇವೆ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ತಾವು ಸೇರಿದಂತೆ 38 ಶಾಸಕರು ಪತ್ರ ಬರೆದಿದ್ದು, ಐದು ಮಂದಿ ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ಕೋರಿದ್ದೇವೆ. ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ತಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈಯಕ್ತಿಕವಾಗಿ ತನಗೆ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್​​ ಗಣಿಗ ತಿಳಿಸಿದ್ದಾರೆ.

ಕೆಲವು ಸಚಿವರು ಶಾಸಕರ ಕೈಗೆ ಸಿಗುತ್ತಿಲ್ಲ, ಅವರಿಂದ ಯಾವುದೇ ಕೆಲಸವಾಗುತ್ತಿಲ್ಲ. ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ತಾವು ದೇವಲೋಕದಿಂದ ಬಂದವರು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಲವು ಸಚಿವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಅಂತಹವರು ಮುಂದುವರಿಯಲಿ. ಆದರೆ, ಕೆಲವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕೊಡುವುದು ಒಳ್ಳೆಯದು ಎಂದು ಅವರು ಪ್ರತಿಪಾದಿಸಿದರು.

Ravikumar Ganiga
ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

ಚಲುವರಾಯಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಹಿರಿಯರಿದ್ದು, ಅವರಿಗೂ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು. ದಲಿತ ಖೋಟಾದಲ್ಲಿ ನರೇಂದ್ರಸ್ವಾಮಿ ಅವರಿಗೆ ಕೊಟ್ಟರೆ ಖುಷಿ ಎಂದು ಅವರು ಪ್ರತಿಕ್ರಿಯಿಸಿದರು.

ಇನ್ನು ನಾಯಕತ್ವದ ಬದಲಾವಣೆಯ ಕೂಗು ಶುರುವಾಗುವ ಮುನ್ನವೇ ಸಂಪುಟ ಪುನರ್‌ರಚನೆ ಮಾಡಿದರೆ, ಗೊಂದಲಗಳು ಬಗೆ ಹರಿಯುತ್ತವೆ. ಮುಖ್ಯಮಂತ್ರಿ ಸ್ಥಾನ ಅಬಾಧಿತವಾಗಿರಲಿದೆ ಎಂಬುವುದು ಸಿದ್ದರಾಮಯ್ಯ ಅವರ ಬಣದ ಲೆಕ್ಕಚಾರ. ಇದಕ್ಕಾಗಿ ಹಿರಿಯ ಶಾಸಕರು ದೆಹಲಿಗೆ ತೆರಳಿ ಸಂಪುಟ ಪುನರ್‌ರಚನೆಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಹೊಸಬರಾಗಲಿ, ಹಳಬರಾಗಲಿ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಅದಕ್ಕಾಗಿ ದೆಹಲಿ ಹೈಕಮಾಂಡ್ ಹತ್ತಿರ ಹೋಗುತ್ತಾರೆ. ನಾವು ಕೂಡ ಹಾಗೆ ಮನವಿ ಮಾಡಿದ್ದೇವೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಅವರು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com