

ಬೆಂಗಳೂರು: ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ರವರನ್ನು 'ಭಯೋತ್ಪಾದಕ' ಎಂದು ತೀರಾ ಕೀಳು ಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ ಪರಮಾವಧಿ ಮಾತ್ರವಲ್ಲ, ಅದು ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು,ಹೆಮ್ಮೆಯ ಪ್ರಧಾನಿ ಶ್ರೀ ಮೋದಿ ಜೀ ರವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿಟ್ಟು ಭಾರತದ ಜನತೆ ಸತತ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುವ ಭರದಲ್ಲಿ ಹೀಗೆ ಅವಮಾನಿಸುವುದು ಎಂದರೆ ಮೋದಿ ಜೀ ರವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರನ್ನು ಅಪಮಾನಿಸಿದಂತೆ! ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿಬಿಟ್ಟಿದೆ.
ಚುನಾವಣೆ ಬಂದಾಗಲೆಲ್ಲ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಜನರು ನಿಮಗೆ ಪಾಠ ಕಲಿಸುತ್ತಲೇ ಬಂದಿದ್ದಾರೆ. ಆದರೂ ತಿದ್ದಿಕೊಳ್ಳದ ನಿಮ್ಮ ವರ್ತನೆ ನಿಮ್ಮ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ ಎಂದು ಕಿಡಿ ಕಾರಿದ್ದಾರೆ.
ನರೇಂದ್ರ ಮೋದಿಯವರು ಅಪ್ರತಿಮ ಜಾಗತಿಕ ನಾಯಕ ಎಂದು ವಿಶ್ವದ ಹಲವಾರು ದೇಶಗಳ ನೇತಾರರು ಕೊಂಡಾಡುತ್ತಿದ್ದಾರೆ. ವಿಶ್ವದ 26ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಮೋದಿ ಜೀ ಯವರ ನಾಯಕತ್ವವನ್ನು ಗೌರವಿಸಿವೆ.
ಇಡೀ ಜಗತ್ತೇ ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ಕೇವಲ ನಿಮ್ಮ ರಾಜಕೀಯ ವೈಷಮ್ಯಕ್ಕಾಗಿ ದೇಶದ ಪ್ರಧಾನಮಂತ್ರಿಗಳ ಬಗ್ಗೆ ಇಷ್ಟು ಕೀಳುಮಟ್ಟದ ಶಬ್ದಗಳನ್ನು ಬಳಸುವುದು, ನಿಮ್ಮ ಕೀಳು ಮನಸ್ಥಿತಿಯನ್ನು ಮತ್ತು ನಿಮ್ಮ ರಾಜಕೀಯ ಹತಾಶೆಯನ್ನು ಸಾಬೀತುಪಡಿಸಿದೆ.
ಅಧಿಕಾರದ ಹಪಾಹಪಿಯಲ್ಲಿ, ಒಂದು ಮನೆತನವನ್ನು ಸಂತೋಷಪಡಿಸುವ ಭರದಲ್ಲಿ ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ಹಿರಿಯರಾದ ನಿಮ್ಮಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೀಳು ಮಟ್ಟದ ಅಸಂಬದ್ಧ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಿ ಎಂದು ಆಗ್ರಹಿಸಿದ್ದಾರೆ.
Advertisement