

ಬೆಂಗಳೂರು: ಏಪ್ರಿಲ್ 9ರಂದು ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷದ ಪ್ರಯತ್ನಗಳನ್ನು ಹಾಳು ಮಾಡಲು ಕೆಲವರು ಯತ್ನಿಸಿದ್ದಾರೆಯೆಂಬ ಆರೋಪದ ಹಿನ್ನೆಲೆಯಲ್ಲಿ, ಕೆಪಿಸಿಸಿಯ ಅಲ್ಪಸಂಖ್ಯಾತ ಮುಖಂಡರು ಪಕ್ಷದ ಹೈಕಮಾಂಡ್‌ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಪಕ್ಷದ ಸದಸ್ಯರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಲ್ಲಿ ಸೂಕ್ತ ಪ್ರಕ್ರಿಯೆ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕರನ್ನು ಕಡೆಗಣಿಸಿದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ MLC ಅಬ್ದುಲ್ ಜಬ್ಬಾರ್ ಅವರನ್ನು ವಜಾಗೊಳಿಸಿ , MLC ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿತ್ತು.
ಪಕ್ಷದ ನಾಯಕರಾದ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅಹ್ಮದ್, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದೇ, ಅಲ್ಲಿ ಪ್ರಭಾವಿ ಸಮುದಾಯವಿದ್ದರೂ, ದಿವಂಗತ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಿರುವುದರಿಂದ ಅಸಾಮಾಧಾನಗೊಂಡಿದ್ದರು ಎಂದು ಆರೋಪಿಸಿದ್ದರು.
ಜಬ್ಬಾರ್ ಆಗಲಿ, ನಸೀರ್ ಅಹ್ಮದ್ ಆಗಲಿ, ಕ್ರಮ ಕೈಗೊಳ್ಳಲು ಒಂದು ಪ್ರಕ್ರಿಯೆ ಇದೆ. ನಸೀರ್ ಅಹ್ಮದ್ ಹಿರಿಯ ಸದಸ್ಯರು. ಸತೀಶ್ ಜಾರಕಿಹೊಳಿ ಹೇಳಿದಂತೆ, ಪಕ್ಷವು ಮೊದಲು ನೊಟೀಸ್ ನೀಡಿ ಅವರ ಪ್ರತಿಕ್ರಿಯೆಗೆ ಕಾಯಬೇಕಿತ್ತು ಎಂದು ಜಮೀರ್ ಹೇಳಿದರು.
ಕರ್ನಾಟಕದಲ್ಲಿ ಮುಸ್ಲಿಂ ನಾಯಕರ ಬಗ್ಗೆ ಪಕ್ಷ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಧಾರ್ಮಿಕ ನಾಯಕರು ಕಾಂಗ್ರೆಸ್ ಹೈಕಮಾಂಡ್‌ಗೆ ಬರೆದ ಪತ್ರದ ಬಗ್ಗೆ ಕೇಳಿದಾಗ, ಧಾರ್ಮಿಕ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ನಾನು ಏನು ಹೇಳಲಿ ಎಂದು ಕೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟಿಕೆಟ್ ಕುರಿತು ತೀರ್ಮಾನ ತೆಗೆದುಕೊಳ್ಳುವಾಗ ಮುಸ್ಲಿಂ ನಾಯಕರು ಉಪಸ್ಥಿತರಿದ್ದು ಅದಕ್ಕೆ ಒಪ್ಪಿಕೊಂಡಿದ್ದರು ಎಂದರು.
Advertisement