ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ DCM: ಅಧಿಕಾರಕ್ಕಾಗಿ ಡಿಕೆ ಸಹೋದರರ ಬಿಗಿಪಟ್ಟು; ಆಪ್ತರ ಜೊತೆ ಸಿದ್ದರಾಮಯ್ಯ ಸಭೆ- ಮೇ ತಿಂಗಳಲ್ಲಿ ಕ್ಲೈಮ್ಯಾಕ್ಸ್!

ಶಿವಕುಮಾರ್ ಅವರೊಂದಿಗೆ ಅವರ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಇದ್ದರು. ಮುಚ್ಚಿದ ಬಾಗಿಲಿನ ಸಭೆ 40 ನಿಮಿಷಗಳಿಗೂ ಹೆಚ್ಚು ಕಾಲ ನಡೆದಿದೆ.
Siddaramaiah and dk shivakumar
ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್
Updated on

ದೆಹಲಿ: ಮುಖ್ಯಮಂತ್ರಿಯಾಗಬೇಕೆಂದು ಪಣ ತೊಟ್ಟಿರುವ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ದಾವಣಗೆರೆ ಉಪ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ನಾನಾ ಬೆಳವಣಿಗೆಗಳು ನಡೆಯುತ್ತಿವೆ. ಅತ್ತ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಹೈ ಕಮಾಂಡ್ ನಾಯಕರ ಭೇಟಿಯಾಗಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಆಪ್ತ ಸಚಿವರ ಸಭೆ ನಡೆಸಿದ್ದಾರೆ.

ಶಿವಕುಮಾರ್ ಅವರೊಂದಿಗೆ ಅವರ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಇದ್ದರು. ಮುಚ್ಚಿದ ಬಾಗಿಲಿನ ಸಭೆ 40 ನಿಮಿಷಗಳಿಗೂ ಹೆಚ್ಚು ಕಾಲ ನಡೆಯಿತು, ಆದರೂ ಚರ್ಚೆಗಳ ನಿಖರವಾದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಚುನಾವಣಾ ಫಲಿತಾಂಶ ಬರುವ ದಿನವಾದ ಮೇ 4 ರವರೆಗೆ ಕಾಯುವುದು ಮತ್ತಷ್ಟು ತಡವಾಗುತ್ತೆ ಎಂಬ ಲೆಕ್ಕಾಚಾರದಲ್ಲಿ ಡಿಕೆಶಿ ಇದ್ದಾರೆ ಎನ್ನಲಾಗಿದೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ, ಕೇಂದ್ರ ಸಚಿವರನ್ನು ಭೇಟಿ ಮಾಡುವ ಕಾರಣ ನೀಡಿ ದೆಹಲಿಗೆ ಬಂದಿರುವ ಶಿವಕುಮಾರ್ ಅವರು ಅಧಿಕಾರ ಹಸ್ತಾಂತರದ ಬಗ್ಗೆ ಮತ್ತೆ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿದ್ದಾರೆ.

Siddaramaiah and dk shivakumar
ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ, ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದೇನೆ: ಡಿ.ಕೆ ಶಿವಕುಮಾರ್ ಮಾರ್ಮಿಕ ನುಡಿ

ಐದು ರಾಜ್ಯಗಳ ಫಲಿತಾಂಶ ಪ್ರಕಟಕ್ಕೆ ಮುನ್ನವೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಮನವೊಲಿಸಬೇಕು ಎಂದೂ ಹೇಳಿದ್ದಾರೆ. ಖರ್ಗೆ ಅವರಲ್ಲಿ ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಹೈಕಮಾಂಡ್‌ ನನಗೆ ಭರವಸೆ ನೀಡಿತ್ತು. ಉಭಯ ನಾಯಕರನ್ನು ಕರೆಸಿ ಬಿಕ್ಕಟ್ಟು ಬಗೆಹರಿಸುವುದಾಗಿ ಹೈಕಮಾಂಡ್‌ ಆರು ತಿಂಗಳ ಹಿಂದೆ ಭರವಸೆ ನೀಡಿತ್ತು. ದೆಹಲಿಯಲ್ಲಿ ಮಾತುಕತೆಗೆ ಮೂರು ಸಲ ದಿನಾಂಕ ನಿಗದಿ ಮಾಡಲಾಗಿತ್ತು. ವಿಶೇಷ ಅಧಿವೇಶನ ಮತ್ತಿತರ ನೆಪ ಹೇಳಿ ಮುಖ್ಯಮಂತ್ರಿಯವರು ದೆಹಲಿಗೆ ಬರಲಿಲ್ಲ.

ಅದಾದ ಬಳಿಕ, ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟ ವಾಯಿತು. ಹೈಕಮಾಂಡ್‌ ನಿರ್ದೇಶನದ ಪ್ರಕಾರ, ಅಸ್ಸಾಂ, ಕೇರಳ ಹಾಗೂ ತಮಿಳುನಾಡಿನಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಇದೀಗ ಚುನಾವಣೆ ಮುಗಿದಿದೆ. ಅಧಿಕಾರ ಹಸ್ತಾಂತರದ ಬಗ್ಗೆ ಹೈಕಮಾಂಡ್‌ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶಿವಕುಮಾರ್‌ ಆಗ್ರಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com