ನ್ಯಾ. ನಾಗಮೋಹನ್‍ದಾಸ್ ವರದಿ ಅವೈಜ್ಞಾನಿಕ ಎಂದು ತಿರಸ್ಕರಿಸಿದ್ದೀರಾ?: ಸರ್ಕಾರಕ್ಕೆ BJP ಪ್ರಶ್ನೆ

ನಾಗಮೋಹನ್‍ದಾಸ್ ಅವರ ವರದಿಯಲ್ಲಿ ಶೇ.17 ಎಂದಿದ್ದರೂ ಶೇ.15ಕ್ಕೆ ಸೀಮಿತ ಮಾಡಿ ಕೊಡಬಹುದಾಗಿತ್ತು. ಯಾಕೆ ಕೊಟ್ಟಿಲ್ಲ. ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದಂತೆ ಸಿದ್ದರಾಮಯ್ಯ ಅವರು ಒಳ ಮೀಸಲಾತಿಯನ್ನು ಜಾರಿ ನಿರ್ಧಾರ ಪ್ರಕಟಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
BJP
ಬಿಜೆಪಿonline desk
Updated on

ಬೆಂಗಳೂರು: ನೀವೇ ನೇಮಿಸಿದ ನ್ಯಾ.ನಾಗಮೋಹನ್‍ದಾಸ್ ಅವರ ವರದಿ ಅವೈಜ್ಞಾನಿಕ ಎಂಬ ಕಾರಣಕ್ಕೆ ತಿರಸ್ಕರಿಸಿದ್ದೀರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂತರಿಕ ಮೀಸಲಾತಿ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಸಲ್ಲಿಸಿದ್ದ ಈ ಆಯೋಗದ ವರದಿಯ ಬಗ್ಗೆ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದರು.

ನಾಗಮೋಹನ್‍ದಾಸ್ ಅವರ ವರದಿಯಲ್ಲಿ ಶೇ.17 ಎಂದಿದ್ದರೂ ಶೇ.15ಕ್ಕೆ ಸೀಮಿತ ಮಾಡಿ ಕೊಡಬಹುದಾಗಿತ್ತು. ಯಾಕೆ ಕೊಟ್ಟಿಲ್ಲ. ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದಂತೆ ಸಿದ್ದರಾಮಯ್ಯ ಅವರು ಒಳ ಮೀಸಲಾತಿಯನ್ನು ಜಾರಿ ನಿರ್ಧಾರ ಪ್ರಕಟಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎಂದು ನಿರಂತರ ಭಾಷಣ ಮಾಡಿದ್ದೀರಲ್ಲವೇ? ಇದು ಕೇವಲ ಭಾಷಣದ ಸರಕೇ..? ಸಿದ್ದರಾಮಯ್ಯ ಅವರೇ, ಅಹಿಂದ ವರ್ಗದ ಕುರಿತು ನಿಮಗೇನಾದರೂ ಬದ್ಧತೆ ಇದೆಯೇ? ಬದ್ಧತೆ ಇದ್ದರೆ ನೀವು ಸಾವಿರಾರು ಕೋಟಿ ಖರ್ಚು ಮಾಡಿ ವರದಿ ತರಿಸಿದ್ದೀರಿ. ಕೆಂಪರಾಜ್ ವರದಿ ಮೂಲೆಗುಂಪು ಮಾಡಿದ್ದೀರಿ. ಅದಾದ ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ವರದಿ ಮೂಲೆಗುಂಪಾಗಿದೆ. ಮಧುಸೂದನ ನಾಯಕ್ ವರದಿ ಹೊರಗೆ ಬರಲೇ ಇಲ್ಲ ಎಂದು ಆರೋಪಿಸಿದರು.

ನಿಮಗೆ ಬದ್ಧತೆ ಎಲ್ಲಿದೆ? ಜನರಿಗೆ ಮೋಸ ಮಾಡಿ, ಬಡವರನ್ನು ದಾರಿ ತಪ್ಪಿಸಿ ಬಡವರಿಗೆ ಅಹಿಂದ ನಾಯಕ ಎಂದು ಹೇಳಿ ಅಧಿಕಾರಕ್ಕೆ ಬರುವುದೊಂದೇ ನಿಮ್ಮ ಗುರಿ. ಕುರ್ಚಿ ಉಳಿಸಿಕೊಳ್ಳಲು ನೀವು ಮಾಡುವುದನ್ನು ನೋಡಿದರೆ ಇದಕ್ಕಿಂತ ಹೆಚ್ಚಿನ ಮೋಸವನ್ನು ಪ್ರಪಂಚದಲ್ಲಿ ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ ಎನಿಸುತ್ತಿದೆ, ಸಿದ್ದರಾಮಯ್ಯ ಅವರು ಮಹಾ ಮೋಸಗಾರ ಎಂದು ಟೀಕಿಸಿದರು.

BJP
ಒಳ ಮೀಸಲಾತಿ ನಿರ್ಧಾರಕ್ಕೆ ಜನಮನ್ನಣೆ ಸಿಕ್ಕಿದ್ದು, ಇದು ಐತಿಹಾಸಿಕ ನಿರ್ಧಾರ: ಸಚಿವ ಸತೀಶ್ ಜಾರಕಿಹೊಳಿ

ನಾವು ವೈಜ್ಞಾನಿಕವಾಗಿ ಶೇ.17ಕ್ಕೆ ಹೆಚ್ಚಿಸಿ ಮೀಸಲಾತಿ ಕೊಟ್ಟಿದ್ದೆವು. ಅಂದಿನ ಕಾನೂನು ಸಚಿವ ಮಾಧುಸ್ವಾಮಿ ಅವರ ವರದಿ ಪಡೆದು ವೈಜ್ಞಾನಿಕವಾಗಿ ಹಂಚಿದ್ದೆವು. ಎ- ಶೇ 6, ಬಿ- ಶೇ 5.5, 4.5, ಶೇ 1 ಅಲೆಮಾರಿಗಳಿಗೆ ಕೊಟ್ಟಿದ್ದೆವು. 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರ ಸಿಕ್ಕಿದರೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. ಬಳಿಕ ಸಿದ್ದರಾಮಯ್ಯನವರು ಬೀದಿಯಲ್ಲಿ ಜನರನ್ನು ಬಡಿದಾಡಲು ಬಿಟ್ಟು ಅವರು ಆನಂದವಾಗಿ ವಿಧಾನಸೌಧದಲ್ಲಿ ಕಾಲ ಕಳೆದಿದ್ದರು ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಈಚೆಗೆ ಕೇವಲ ಹೊಂದಾಣಿಕೆಯ ರಾಜಕಾರಣಿ ಆಗಿದ್ದಾರೆಂದು ಅವರ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಅದು ಅಸತ್ಯವೇ ಸತ್ಯವೇ ಎಂದು ಮುಖ್ಯಮಂತ್ರಿಗಳೇ ಹೇಳಲಿ ಎಂದು ಒತ್ತಾಯಿಸಿದ ಅವರು, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಸಿದ್ದರಾಮಯ್ಯ ಅವರಿಗೆ ಬದ್ಧತೆ ಇಲ್ಲ ಎನ್ನುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರ ಸರಕಾರ ಯಾವುದೇ ಆಯೋಗಕ್ಕೆ ನೇಮಿಸಿದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ. ನಿಮಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಾರೆ ಎಂದು ಮನವಿ ಮಾಡಿದರು.

ಮೀಸಲಾತಿ ವಿಷಯದಲ್ಲಿ ನಿನ್ನೆಯ ಅವರ ನಿರ್ಧಾರವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸದಾಶಿವಯ್ಯ ವರದಿ, ನಾಗಮೋಹನ್‍ದಾಸ್ ವರದಿ, ನಮ್ಮದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟ ಉಪ ಸಮಿತಿ ವರದಿ ಇತ್ತು. ಸುಪ್ರೀಂ ಕೋರ್ಟ್ ಆದೇಶ ಇತ್ತು. ಯಾವುದನ್ನೂ ಪರಿಗಣಿಸದೇ ಖಾಜಿ ನ್ಯಾಯ ಮಾಡಿದ್ದಾರೆಂದು ಕಿಡಿಕಾರಿದರು.

“ಹಿಂದಿನ ಅಧಿವೇಶನದಲ್ಲಿ, ಮೂರು ವರ್ಗಗಳಿಗೆ 6:6:5 ಅನುಪಾತದಲ್ಲಿ ಮೀಸಲಾತಿಯನ್ನು ನೀಡಲಾಯಿತು. ನೀವು ಮಸೂದೆಯನ್ನು ಅಂಗೀಕರಿಸಿದ್ದೀರಿ ಮತ್ತು ಶೇ.17 ಕ್ಕೆ ರಾಜ್ಯಪಾಲರ ಅನುಮೋದನೆಯನ್ನು ಪಡೆದುಕೊಂಡಿದ್ದೀರಿ ಆದರೆ, ಅದನ್ನು ಜಾರಿಗೆ ತರಲಿಲ್ಲ. ಎಸ್‌ಸಿ ಉಪಜಾತಿಗಳು ತಮ್ಮತಮ್ಮಲ್ಲೇ ಹೋರಾಡಿ ನ್ಯಾಯಾಲಯದಲ್ಲಿ ಸೋಲಬೇಕು ಎಂಬುದು ನಿಮ್ಮ ಉದ್ದೇಶ ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com