

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇ 15 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದೆಹಲಿಗೆ ಹೋಗಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬಂದಿದ್ದರು, ಮೇ ತಿಂಗಳಲ್ಲಿ ರಾಜಕೀಯ ಕ್ರಾಂತಿ ಕರ್ನಾಟಕದಲ್ಲಿ ಆಗುತ್ತಾ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಕುರಿತು ಇಂದು ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ಹುಟ್ಟುಹಬ್ಬದಂದು ಯಾವುದೇ ಕಾರ್ಯಕರ್ತರು ಅಥವಾ ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಜಾಹೀರಾತು ಬೇಕಿದ್ದರೆ ಹಣ ಕಟ್ಟಿ ಮಾಡಿಕೊಳ್ಳಿ, ಆದರೆ ರಸ್ತೆಯಲ್ಲಿ ಹಾಕಬಾರದು ಎಂದು ಮನವಿ ಮಾಡಿದ್ದಾರೆ.
ಪಕ್ಷದಲ್ಲಿನ ಸಿಎಂ ಕುರ್ಚಿ ಕಾದಾಟ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತ ಗೊಂದಲಗಳ ನಡುವೆ, ಸಚಿವ ಸತೀಶ್ ಜಾರಕಿಹೊಳಿ ಪಕ್ಷದಲ್ಲಿ ಗೊಂದಲವಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸ ಇದೆ. ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನು ಮಾಡ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Advertisement