

ಬೆಂಗಳೂರು: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸೋಮವಾರ ಸಂಜೆ ನಿಗದಿಯಾಗಿದ್ದು, 20 ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಿದೆ.
ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ ರಘುಮೂರ್ತಿ ಅವರೂ ಸ್ಥಾನ ಪಡೆದಿದ್ದು, ಇಂದು ಸಂಜೆ ಲೋಕಭವನದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
'ಹ್ಯಾಟ್ರಿಕ್ ಶಾಸಕ' ಎಂದೇ ಖ್ಯಾತಿ ಪಡೆದಿರುವ ಟಿ ರಘುಮೂರ್ತಿ ಅವರು ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಏಕೈಕ ಪ್ರಾತಿನಿಧ್ಯವಾಗಿ ಡಿ ಸುಧಾಕರ್ ಅವರು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಆದರೆ 2026ರ ಮೇ ತಿಂಗಳಲ್ಲಿ ಸುಧಾಕರ್ ಅವರ ಅಕಾಲಿಕ ನಿಧನದಿಂದಾಗಿ ಜಿಲ್ಲೆಗೆ ಸಂಪುಟದಲ್ಲಿದ್ದ ಪ್ರಾತಿನಿಧ್ಯ ಶೂನ್ಯವಾಗಿತ್ತು. ಇದೀಗ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯಲ್ಲಿ ಸುಧಾಕರ್ ಅವರ ಅಗಲಿಕೆಯಿಂದ ತೆರವಾದ ಜಿಲ್ಲಾ ಕೋಟಾವನ್ನು ತುಂಬಲು ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಟಿ ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ರಘುಮೂರ್ತಿ ಅವರು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಡಬನಕಟ್ಟೆ ಗ್ರಾಮದ ರಘುಮೂರ್ತಿ ಅವರು, ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದು, ಭೂಸೇನಾ ನಿಗಮದಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ರಾಜಕಾರಣಕ್ಕೆ ಧುಮುಕಿದ ರಘುಮೂರ್ತಿ ಅವರು 2013ರಲ್ಲಿ, 2018 ಮತ್ತು 2023ರಲ್ಲಿ ಸತತ ಮೂರು ಗೆಲುವು ಸಾಧಿಸುವ ಮೂಲಕ 'ಹ್ಯಾಟ್ರಿಕ್ ಶಾಸಕ' ಎಂದೇ ಖ್ಯಾತಿ ಪಡೆದರು.
ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ
ಮೊದಲ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಟಿ ರಘುಮೂರ್ತಿ ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಶಾಲಾಕ್ಷಿ ನಟರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಗಣ್ಯರು ಶುಭಾಶಯ ಕೋರಿದ್ದಾರೆ.