

ಮೈಸೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪಿರುವುದು ನಿರಾಸೆ ತಂದಿದೆ. ಮೈಸೂರು ಭಾಗಕ್ಕೆ ಸಚಿವ ಸಂಪುಟದಲ್ಲಿ ಸಿಗಬೇಕಿದ್ದ ಪ್ರಾತಿನಿಧ್ಯ ದೊರೆತಿಲ್ಲ. ಈ ಪಟ್ಟಿ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಹೇಳಿದರು.
ಇದೇ ವೇಳೆ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದ ಅವರು, ಪಕ್ಷದ ನಾಯಕರಿಗೆ ಸವಾಲು ಹಾಕಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ, ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕಿಲ್ಲ. ಯಾವ ಮಾನದಂಡದ ಆಧಾರದ ಮೇಲೆ ಸಚಿವ ಸಂಪುಟ ರಚನೆ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರಣಕ್ಕೆ ಸಚಿವ ಕೆ.ಎನ್. ರಾಜಣ್ಣ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಲಾಯಿತು. ಆದರೆ,ಈಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ನೀಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ನಾಯಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಿಗೂ ಅವಕಾಶ ನೀಡಲಾಗಿಲ್ಲ. ಆದರೆ, ಪಕ್ಷಕ್ಕೆ ಸವಾಲು ಹಾಕಿದವರಿಗೆ ಸ್ಥಾನ ನೀಡಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇದೇ ವೇಳೆ ಸಚಿವ ಸಂಪುಟಕ್ಕೆ ಆಯ್ಕೆಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, "ನನಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ನನ್ನ ಬೆಂಬಲಿಗರು ಮತ್ತು ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಬೆಂಬಲಿಗರ ಪ್ರತಿಭಟನೆ
ಈ ನಡುವೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರು ಸಿಟ್ಟಾಗಿದ್ದು, ಉದಯಗಿರಿಯಲ್ಲಿರುವ ಸೇಠ್ ನಿವಾಸದ ಹೊರಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಾಜೀನಾಮೆ ಕೊಟ್ಟುಬಿಡಿ ಸರ್”, “ಪಕ್ಷವಿರೋಧಿಗಳಿಗೆ ಸಚಿವ ಸ್ಥಾನ ನೀಡುತ್ತಾರೆ, ನಮಗೇಕೆ ನ್ಯಾಯ ಇಲ್ಲ?”, “ಪೇಮೆಂಟ್ ಗಿರಾಕಿಗಳಿಗೆ ಮಂತ್ರಿಗಿರಿ, ನಿಷ್ಠಾವಂತರಿಗೆ ಅನ್ಯಾಯ” ಎಂದು ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
“ನೀವೇನೂ ತಪ್ಪು ಮಾಡಿಲ್ಲ. ನೆನ್ನೆ-ಮೊನ್ನೆ ಬಂದವರಿಗೆ, ಪಕ್ಷಕ್ಕೆ ಮೋಸ ಮಾಡಿದವರಿಗೆ ಸ್ಥಾನ ಕೊಡುತ್ತಾರೆ. ಇಂತಹ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಥವೇ ಇಲ್ಲ” ಎಂದು ಬೆಂಬಲಿಗರು ತನ್ವೀರ್ ಸೇಠ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಸೇಠ್ ಬೆಂಬಲಿಗರಲ್ಲಿ ತಬ್ರೆಜ್ ಎಂಬ ವ್ಯಕ್ತಿ, ಶಾಸಕರ ನಿವಾಸದ ಹೊರಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದನು. ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು.
ನಂತರ ಸೇಠ್ ತಮ್ಮ ಬೆಂಬಲಿಗರನ್ನು ಶಾಂತವಾಗಿರಲು ಮನವಿ ಮಾಡಿದರು ಮತ್ತು ಉದ್ರಿಕ್ತರನ್ನು ವೈಯಕ್ತಿಕವಾಗಿ ಸಮಾಧಾನಪಡಿಸಲು ಪ್ರಯತ್ನಿಸಿದರು.