

ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ನಂತರ ಸೋಮವಾರ 20 ಮಂದಿ ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಇದರೊಂದಿಗೆ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದೆ.
ಮುಖ್ಯಮಂತ್ರಿಯವರ ಕಚೇರಿಯ ಪ್ರಕಾರ, ಸಂಜೆ 4:05ಕ್ಕೆ ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇದರೊಂದಿಗೆ ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಸಚಿವರ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಗೆ ಅನುಮೋದನೆ ನೀಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಹೆಸರುಗಳನ್ನು ಶಿವಕುಮಾರ್ ಅವರಿಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಈ ಬಾರಿ ಮೂವರು ಮುಸ್ಲಿಂರಿಗೆ ಸಚಿವ ಸ್ಥಾನ: ವಿಸ್ತರಿತ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದ ಯಾವುದೇ ಶಾಸಕರು ಸಚಿವರಾಗಿಲ್ಲ. ಈ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾಗಿದ್ದರು. ಈ ಬಾರಿ ಮೂವರು ಮುಸ್ಲಿಂರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಈ ಸಮುದಾಯದ ಪ್ರಾತಿನಿಧ್ಯ ಏರಿಕೆಯಾಗಿದೆ. ಇದು ಹೊಸ ಸಂಪುಟದ ಗಮನಾರ್ಹ ಲಕ್ಷಣಗಳಲ್ಲಿ ಒಂದಾಗಿದೆ.
ಕೇವಲ ಏಕೈಕ ಮಹಿಳಾ ಸಚಿವರು: ಲಿಂಗ ಸಮಾನತೆಯ ದೃಷ್ಟಿಯಿಂದ ಹೆಚ್ಚಿನ ಮಹಿಳಾ ಪ್ರಾತಿನಿಧ್ಯದ ನಿರೀಕ್ಷೆಗಳಿದ್ದರೂ, ಹೊಸ ಸಂಪುಟದಲ್ಲಿ ಕೇವಲ ಏಕೈಕ ಮಹಿಳಾ ಸಚಿವರಿದ್ದಾರೆ. ಕೆಲವೇ ಕೆಲವು ಯುವ ಮತ್ತು ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಮೊದಲ ಬಾರಿಗೆ ಸಚಿವರಾಗಲಿರುವ ಯುವ ನಾಯಕರಲ್ಲಿ ರಿಜ್ವಾನ್ ಅರ್ಷದ್ ಮತ್ತು ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಸೇರಿದ್ದಾರೆ.
ಹೊಸಮುಖಗಳು: ನರೇಂದ್ರ ಸ್ವಾಮಿ, ಬಸವಂತಪ್ಪ, ರಘುಮೂರ್ತಿ, ಪುಟ್ಟರಂಗಶೆಟ್ಟಿ, ಗಾಯತ್ರಿ ಶಾಂತೇಗೌಡ, ವಿಜಯಾನಂದ ಕಾಶಪ್ಪನವರ್ ಮತ್ತು ಹಿರಿಯ ನಾಯಕ ಶಿವಲಿಂಗೇಗೌಡ ಅವರು ಕೂಡ ಇದೇ ಮೊದಲ ಬಾರಿಗೆ ಸಚಿವ ಸಂಪುಟವನ್ನು ಸೇರಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರೆಂದು ಪರಿಗಣಿಸಲ್ಪಟ್ಟಿರುವ ಹಲವು ಹಿರಿಯ ನಾಯಕರು ಸಂಪುಟದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಅಥವಾ ಮರುಸೇರ್ಪಡೆಯಾಗಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರನ್ನು ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಇವರು, ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆರೋಪಗಳಿದ್ದರೂ ಸಂಪುಟಕ್ಕೆ ಮರಳಿದ್ದಾರೆ. ತಮ್ಮ ಸಮುದಾಯದಲ್ಲಿ ಅವರಿಗಿರುವ ಬಲವಾದ ಬೆಂಬಲದ ನೆಲೆ ಅವರ ಈ ಮರುಸೇರ್ಪಡೆಗೆ ಕಾರಣವೆಂದು ಭಾವಿಸಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿದ್ದರೂ, ಬಿ. ನಾಗೇಂದ್ರ ಕೂಡ ಸಚಿವ ಸಂಪುಟಕ್ಕೆ ಮರಳಿದ್ದಾರೆ.