'ಕೈತಪ್ಪಿದ ಸಚಿವ ಸ್ಥಾನ, ಹಿರಿಯ ನಾಯಕರ ಮುನಿಸು, ಕಾಂಗ್ರೆಸ್ 'ಡ್ಯಾಮೇಜ್ ಕಂಟ್ರೋಲ್': ಮನವೊಲಿಕೆಗೆ ಸಿಎಂ, ಸುರ್ಜೇವಾಲಾ–ಹರಿಪ್ರಸಾದ್ ದೌಡು-Video

ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಚಿವ ಸ್ಥಾನದಿಂದ ಕೈಬಿಡಲಾದ ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ.
AICC General Secretary Randeep Singh Surjewala in conversation with former minister and Congress MLA HK Patil at the latter’s Bengaluru residence
ಹೆಚ್ ಕೆ ಪಾಟೀಲ್ ಅವರ ಬೆಂಗಳೂರು ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ
Updated on

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಳಿಕ ಹಲವು ನಾಯಕರಿಗೆ ಉಂಟಾಗಿರುವ ಅಸಮಾಧಾನವನ್ನು ತಣಿಸಲು ಪಕ್ಷದ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್ ಕಾರ್ಯಾಚರಣೆ ಆರಂಭಿಸಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಎರಡು ದಿನಗಳ ಬಳಿಕ, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಚಿವ ಸ್ಥಾನದಿಂದ ಕೈಬಿಡಲಾದ ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

AICC General Secretary Randeep Singh Surjewala in conversation with former minister and Congress MLA HK Patil at the latter’s Bengaluru residence
HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

ಅವರು ಪಕ್ಷದ ಹಿರಿಯ ನಾಯಕರು. ನಾನು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ಬಿ ಕೆ ಹರಿಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ(The New Indian Express) ತಿಳಿಸಿದ್ದಾರೆ. ಪಕ್ಷದೊಳಗಿನ ಬಿಕ್ಕಟ್ಟು ನಿರ್ವಹಣೆಯ ಭಾಗವಾಗಿ ಇಂದು ಗುರುವಾರ ಇನ್ನಷ್ಟು ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ ಎಂದು ಅವರು ಹೇಳಿದ್ದಾರೆ.

ಗದಗ ಜಿಲ್ಲೆಯ ಹುಲಕೋಟಿಯಲ್ಲಿ ಹೆಚ್.ಕೆ. ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ದಿನೇಶ್ ಗುಂಡೂರಾವ್ ಕೂಡ ತಮಗೆ ಸಚಿವ ಸ್ಥಾನ ಏಕೆ ನೀಡಲಿಲ್ಲ ಎಂಬುದನ್ನು ಯಾರೂ ವಿವರಿಸಿಲ್ಲ ಎಂದು ಬಹಿರಂಗವಾಗಿ ಹೇಳಿದ್ದು, ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲೂ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ.

ಆಳಂದ ಶಾಸಕ ಬಿ.ಆರ್. ಪಾಟೀಲ್ ತಮ್ಮ ಬೆಂಬಲಿಗರಿಗೆ ಬರೆದ ಪತ್ರದಲ್ಲಿ, "ನಾನು ಇನ್ನೂ ಭರವಸೆ ಕಳೆದುಕೊಂಡಿಲ್ಲ" ಎಂದು ಹೇಳುತ್ತಾ, ತಮ್ಮ 50 ವರ್ಷಗಳ ರಾಜಕೀಯ ಜೀವನ ಹಾಗೂ ರಾಹುಲ್ ಗಾಂಧಿ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಆಳಂದದ 'ಮತ ಕಳವು' ಪ್ರಕರಣದಲ್ಲಿನ ತಮ್ಮ ಪಾತ್ರವನ್ನು ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನದಿಂದ ವಂಚಿತರಾದವರ ಪಟ್ಟಿ ದೊಡ್ಡದಾಗಿದೆ. ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ ಹಾಗೂ ಎಂ. ಕೃಷ್ಣಪ್ಪ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇವರಲ್ಲಿ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಲು ಪಕ್ಷ ನಿರ್ಧರಿಸಿದ್ದು, ಈ ಪ್ರಕ್ರಿಯೆಗೆ ಕನಿಷ್ಠ ಒಂದು ತಿಂಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ನಿಯಂತ್ರಣಕ್ಕೆ ತಂತ್ರ ಎರಡು ಹಂತಗಳಲ್ಲಿ ನಡೆಯುತ್ತಿದೆ. ಅಸಮಾಧಾನಗೊಂಡಿರುವ ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸದೆ, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಕೆಲಸ ಮಾಡುವಂತೆ ಹಿರಿಯ ನಾಯಕರು ಖಾಸಗಿಯಾಗಿ ಮನವಿ ಮಾಡುತ್ತಿದ್ದಾರೆ. ಮತ್ತೊಂದೆಡೆ, ಹೈಕಮಾಂಡ್‌ನ ಪ್ರತಿನಿಧಿಗಳು ನೇರವಾಗಿ ಅವರ ನಿವಾಸಗಳಿಗೆ ಭೇಟಿ ನೀಡಿ ಸಮಾಧಾನಪಡಿಸುತ್ತಿದ್ದಾರೆ. ಈ ಮಟ್ಟದ ಸಂಪರ್ಕ ಅಭಿಯಾನವೇ ಇತ್ತೀಚಿನ ಸಂಪುಟ ವಿಸ್ತರಣೆ ಪಕ್ಷದೊಳಗೆ ಎಷ್ಟು ಅಸಮಾಧಾನ ಮೂಡಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಜನಾಭಿಪ್ರಾಯದ ದೃಷ್ಟಿಯಿಂದ ಇದು ಪಕ್ಷಕ್ಕೆ ದೊಡ್ಡ ಹಿನ್ನಡೆ. ಇದು ಅತ್ಯಂತ ಕೆಟ್ಟ ಸಂದೇಶ ನೀಡುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಆಡಳಿತದ ಸಾಧನೆಗಳನ್ನು ಜನರಿಗೆ ತಲುಪಿಸುವ ಬದಲು ಪಕ್ಷದ ಉನ್ನತ ನಾಯಕರು ತಮ್ಮದೇ ಹಿರಿಯ ನಾಯಕರನ್ನು ಸಮಾಧಾನಪಡಿಸುವ ಪರಿಸ್ಥಿತಿ ಎದುರಾಗಿರುವುದನ್ನು ಅವರು ಉಲ್ಲೇಖಿಸಿದ್ದಾರೆ.

ಹೆಚ್.ಕೆ. ಪಾಟೀಲ್, ಬಿ.ಆರ್. ಪಾಟೀಲ್ ಹಾಗೂ ಟಿ.ಬಿ. ಜಯಚಂದ್ರರಂತಹ ಹಿರಿಯ ನಾಯಕರು ಕೇವಲ ಅಸಮಾಧಾನಗೊಂಡ ಶಾಸಕರಲ್ಲ. ತಮ್ಮ ಜಾತಿ, ಸಮುದಾಯ ಮತ್ತು ಸ್ಥಳೀಯ ಮಟ್ಟದಲ್ಲಿ ಬಲಿಷ್ಠ ಪ್ರಭಾವ ಹೊಂದಿರುವ ಅವರು ತಮ್ಮ ಕ್ಷೇತ್ರ ಮಾತ್ರವಲ್ಲದೆ ಪಕ್ಕದ ಎರಡು-ಮೂರು ಕ್ಷೇತ್ರಗಳ ಚುನಾವಣಾ ಫಲಿತಾಂಶದ ಮೇಲೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ದಶಕಗಳ ನಿಷ್ಠೆಯ ಬಳಿಕ ಕಡೆಗಣಿಸಲ್ಪಟ್ಟ ಭಾವನೆ ಅವರಲ್ಲಿ ಉಳಿದರೆ, 2028ರ ಚುನಾವಣೆಯಲ್ಲಿ ಪಕ್ಷಕ್ಕಾಗಿ ಅದೇ ಉತ್ಸಾಹದಿಂದ ಕೆಲಸ ಮಾಡುವ ಸಾಧ್ಯತೆ ಕಡಿಮೆಯಾಗಬಹುದು.

ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಬಿ ಕೆ ಹರಿಪ್ರಸಾದ್ ಅವರ ಭೇಟಿಗಳು ಸದ್ಯಕ್ಕೆ ಪಕ್ಷದ ಇಮೇಜ್ ಸುಧಾರಿಸಲು ನೆರವಾಗಬಹುದಾದರೂ, ಈ ನಾಯಕರ ಬೆಂಬಲಿಗರ ಉತ್ಸಾಹವನ್ನು ಮರುಕಳಿಸುವುದು ಅಷ್ಟು ಸುಲಭವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹುಲಕೋಟಿ, ಆಳಂದ, ಗಾಂಧಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಂಡುಬರುತ್ತಿರುವ ಅಸಮಾಧಾನ ಹಾಗೂ ಟಿ ಬಿ ಜಯಚಂದ್ರ ಅವರ ಮೌನ, ಮುಂದಿನ ಚುನಾವಣೆಯಲ್ಲಿ ಹಲವು ಕ್ಷೇತ್ರಗಳ ಮತ ಹಂಚಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸದ್ಯಕ್ಕೆ ಕಾಂಗ್ರೆಸ್ ನಾಯಕತ್ವ, ಒಂದು ತಿಂಗಳ ಕಾಲ ವೈಯಕ್ತಿಕ ಮಾತುಕತೆಗಳ ಮೂಲಕ ಉಂಟಾಗಿರುವ ಹಾನಿಯನ್ನು ಸರಿಪಡಿಸಬಹುದು ಎಂಬ ನಿರೀಕ್ಷೆಯಲ್ಲಿದೆ. ಆದರೆ 2028ರ ಚುನಾವಣೆಯ ಲೆಕ್ಕಾಚಾರ ಮುಂದೆ ಗೊತ್ತಾಗಲಿದ್ದರೂ, ಈ ಬೆಳವಣಿಗೆಗಳಿಂದ ಉಂಟಾಗಿರುವ ರಾಜಕೀಯ ಸಂದೇಶ ಮಾತ್ರ ಈಗಾಗಲೇ ಪಕ್ಷಕ್ಕೆ ತಲೆನೋವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com